ಭೀಕರ ಅಪಘಾತ, 13 ಮಂದಿ ಸಾವು… ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರದ ಹೊರ ವಲಯದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿ ಹೊಡೆದಿದ್ದರಿಂದಈಭೀಕರ ಅಪಘಾತ ಸಂಭವಿಸಿದೆ.ಇಂದು ಬೆಳಗಿನ ಜಾವ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯ ಮುಂದೆಯೇ ರಸ್ತೆ ಬದಿ ನಿಂತಿದ್ದ ಬಲ್ಕರ್ ಲಾರಿಗೆ ಟಾಟಾ ಸುಮೋ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸುಮೋದಲ್ಲಿದ್ದ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಗಂಭೀರವಾಗಿ ಗಾಯಗೊಂಡಿದ್ದ ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಓರ್ವ ಗಾಯಾಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.ಟಾಟಾ ಸುಮೋ ಬಾಗೇಪಲ್ಲಿಯಿಂದ ಚಿಕ್ಕಬಳ್ಳಾಪುರದ ಕಡೆ ಹೋಗುತ್ತಿತ್ತು. ಆದರೆ ದಟ್ಟ ಮಂಜು ಕವಿದ ಹಿನ್ನೆಲೆಯಲ್ಲಿ ಟಾಟಾ ಸುಮೋ ಚಾಲಕನಿಗೆ ಸರಿಯಾಗಿ ರಸ್ತೆ ಕಾಣಿಸಿಲ್ಲ. ಇದರಿಂದ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಗು, ಮೂವರು ಮಹಿಳೆಯರು ಸೇರಿ 13 ಜನ ಮೃತಪಟ್ಟಿದ್ದಾರೆ. ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಮೃತರು ಆಂಧ್ರದ ಗೊರಂಟ್ಲ ನಿವಾಸಿಗಳು ಎನ್ನುವುದು ಗೊತ್ತಾಗಿದೆ. ಒಬ್ಬೊಬ್ಬರು ಒಂದೊಂದು ಊರಿನವರು ಎಂಬ ಮಾಹಿತಿ ಸಿಕ್ಕಿದೆ ಎಂದು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಅಪಘಾತದಲ್ಲಿ ಮೃತ ಪಟ್ಟ ದುರ್ದೈವಿಗಳಾದ ದೊಡ್ಡಬಳ್ಳಾಪುರ ಪಟ್ಟಣದ ನಿವಾಸಿ ಅರುಣಾ(೨೨), ಬಾಗೇಪಲ್ಲಿಯ ನರಸಿಂಹ ಮೂರ್ತಿ(೩೭), ಆಂಧ್ರ ಪ್ರದೇಶದ ಗೊರಟ್ಲ ಪಲ್ಲಿಯ ನರಸಿಂಹಪ್ಪ(೪೦), ರಿತ್ವಿಕ್(೬), ಪೆರಿಮಿಲ್ಲಿ ಪವನ್ ಕುಮಾರ್, ಬೆಂಗಳೂರಿನ ಸುಬ್ಬಮ್ಮ(೬೬) , ಪೆನುಗುಂಟಾದ ಶಾಂತಮ್ಮ (೩೭), ಪುಟಪರ್ತಿ ರಾಜವರ್ಧನ್ (೧೫) ಪೆನುಗುಂಟಾದ ವೆಂಕಟರಮಣ(೫೧), ಮರಕೋರಪಲ್ಲಿಯ ನಾರಾಯಣಪ್ಪ(೫೦) ಎಂದು ಗುರುತಿಸಲಾಗಿದ್ದು, ಉಳಿದ ಮೂವರ ಗುರುತು ಇನ್ನೂ ಪತ್ತೆಯಾಗಿಲ್ಲ.
2 ಲಕ್ಷ ಪರಿಹಾರ-ಚಿಕ್ಕಬಳ್ಳಾಪುರದ ಚಿತ್ರಾವತಿ ಸಮೀಪ ನಡೆದ ಭೀಕರ ಅಪಘಾತದಲ್ಲಿ 13 ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ದುಃಖವಾಯಿತು. ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಾರ್ಥಿಸಿದ್ದಾರೆ. ನಮ್ಮ ಸರ್ಕಾರದಿಂದ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ ರೂ.2 ಲಕ್ಷ ಪರಿಹಾರ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.