i
ಕಾಂಗ್ರೆಸ್ಸಿನ ಅಡಿಪಾಯ ಸೇವಾದಳ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ಸಿನ ಅಡಿಪಾಯ ಸೇವಾದಳ. ಕಾಂಗ್ರೆಸ್ ಪಕ್ಷ ಮತ್ತು ಸೇವಾದಳ ಮಾತ್ರ ಸಾಮಾಜಿಕ ನ್ಯಾಯ, ಹೋರಾಟ, ದೇಶದ ಸಮಗ್ರತೆ ಬಗ್ಗೆ ನಂಬಿಕೆ ಇಟ್ಟಕೊಂಡು ದೇಶವನ್ನು, ಸಮಾಜವನ್ನು ಬೆಸೆಯುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ “ಸೇವಾದಳ ಶತಮಾನೋತ್ಸವ ಮತ್ತು ರಾಜ್ಯ ಮಟ್ಟದ ಸಮ್ಮೇಳನ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡ ಚರಿತ್ರೆಯಾಗಲಿ, ಇತಿಹಾಸವಾಗಲಿ ಇಲ್ಲ. ಸೇವಾದಳ ತ್ಯಾಗ ಬಲಿದಾನಗಳ ಮೂಲಕಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿತು. ಗ್ರಾಮ ಸ್ವರಾಜ್ಯ ಮಹಾತ್ಮ ಗಾಂಧಿ ಅವರ ಕನಸು. ನೆಹರೂ ಮತ್ತು ಇಂದಿರಾಗಾಂಧಿ ಅವರ ಕಾಲದಲ್ಲಿ ಗ್ರಾಮಗಳ ಪ್ರಗತಿಗೆ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ನಮ್ಮ ಸರ್ಕಾರ ಕೂಡ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಚುನಾವಣೆಯಲ್ಲಿ ನಾವು ಕೊಟ್ಟ ಎಲ್ಲಾ ಭರವಸೆಗಳನ್ನೂ ಹಿಂದಿನ ಬಾರಿಯೂ ಈಡೇರಿಸಿದ್ದೇವೆ. ಈ ಬಾರಿಯೂ ಈಡೇರಿಸುತ್ತಲೇ ಇದ್ದೇವೆ ಎಂದು ತಿಳಿಸಿದರು. ಸೇವಾದಳ ಕಾರ್ಯಕರ್ತರ ನಿಸ್ವಾರ್ಥ ಸೇವೆಯಿಂದ, ಪ್ರಾಮಾಣಿಕ ಹೋರಾಟದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಬುಡಸಮೇತ ಕಿತ್ತೊಗೆದು ಭಾರತವನ್ನು ಕಾಪಾಡಿಕೊಳ್ಳುವ ರಾಹುಲ್ ಗಾಂಧಿ ಅವರ ಗುರಿಯನ್ನು ಸಾಧಿಸಬೇಕು ಎಂದು ಅವರು ಕರೆ ನೀಡಿದರು.
ಕಾಂಗ್ರೆಸ್ ಸೇವಾದಳ ಸಾರ್ಥಕ ನೂರು ವರ್ಷಗಳನ್ನು ಪೂರೈಸಿದ್ದು, ಅದರ ವಿಚಾರ, ಸಿದ್ದಾಂತಗಳನ್ನು ಪಾಲಿಸಿ, ಪ್ರಚಾರ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮುನ್ನಡೆಸಿದ ಕಾಂಗ್ರೆಸ್ ಸೇವಾದಳವು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಶಿಸ್ತು, ಸಂಯಮ, ಸಂಘಟನಾ ಕೌಶಲ್ಯ ರೂಪಿಸುವ ಮೂಲಕ ಪಕ್ಷದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತಮ ನಾಯಕತ್ವ, ಜಾತ್ಯಾತೀತ ತತ್ವಗಳ ಆಧಾರದಲ್ಲಿ ಸ್ಥಾಪಿತವಾದ ಕಾಂಗ್ರೆಸ್ ಸೇವಾದಳದ ಇತಿಹಾಸವನ್ನು ದೇಶದಾದ್ಯಂತ ಸಾರೋಣ, ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಅವರು ತಿಳಿಸಿದರು.