i
ಗುಜರಾತ್ ನಲ್ಲಿ ಅಪೌಷ್ಠಿಕತೆ ಏರುತ್ತಿದೆ, ಆರೋಗ್ಯದಲ್ಲಿ ಕುಸಿಯುತ್ತಿರುವುದು ಏಕೆ-ಸಿಎಂ ಪ್ರಶ್ನೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಮಾತನಾಡಿದರು. ಗುಜರಾತ್ ಮಾದರಿ ಎಂದು ಹೇಳುತ್ತಿದ್ದವರು ಗುಜರಾತ್ ಅಪೌಷ್ಠಿಕತೆ ಸೂಚ್ಯಂಕದಲ್ಲಿ ಮೇಲಕ್ಕೆ ಏರುತ್ತಾ, ಆರೋಗ್ಯ ಸೂಚ್ಯಂಕದಲ್ಲಿ ಕುಸಿಯುತ್ತಿರುವುದು ಏಕೆ ಎನ್ನುವುದಕ್ಕೆ ಉತ್ತರಿಸಬೇಕು. ಇದೇ ಇಡೀ ದೇಶಕ್ಕೆ ಮಾದರಿ ಆಗಲು ಸಾಧ್ಯವೇ? ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದ್ದಾರೆ.ಬಡತನ – ದಾರಿದ್ರ್ಯ- ಅನಕ್ಷರತೆ ಹೋಗದೆ ಎಲ್ಲರಿಗೂ ಉತ್ತಮ ಆರೋಗ್ಯ ಸಿಗುವುದಿಲ್ಲ. ಆದ್ದರಿಂದ ಈ ಮೂರು ಪಿಡುಗುಗಳಿಗೆ ಚಿಕಿತ್ಸೆ ಕೊಡುವುದು ನಮ್ಮ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಪ್ರತಿಯೊಬ್ಬರ ಮನೆ ಬಾಗಿಲಿಗೆ ಆರೋಗ್ಯದ ಸವಲತ್ತು ತಲುಪಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ಸರ್ಕಾರ ಅಗತ್ಯವಿದ್ದಷ್ಟು ಹಣ ನೀಡಲು ಸಿದ್ದವಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಬ್ಬರೂ ಸೇರಿ ನಮ್ಮ ರಾಜ್ಯದ ಮಕ್ಕಳು ಮತ್ತು ಪ್ರತಿಯೊಬ್ಬರೂ ಅತ್ಯಂತ ಆರೋಗ್ಯವಂತರಾಗುವಂತೆ ಇನ್ನಷ್ಟು ಹೆಚ್ಚೆಚ್ಚು ಶ್ರಮಿಸಿ ಸರ್ಕಾರದ ಗುರಿಯನ್ನು ಸಾಧಿಸಿ ತೋರಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.