i
ಜಿಲ್ಲೆಯ 289 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಅಗತ್ಯ ಕ್ರಮ ವಹಿಸಿ- ಜಿಲ್ಲಾಧಿಕಾರಿ ವೆಂಕಟೇಶ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: Take necessary steps to prevent drinking water problem- Collector Venkatesh…
ಜಿಲ್ಲೆಯಲ್ಲಿ ಬೇಸಿಗೆಯ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಗಳಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಈಗಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕುಡಿಯುವ ನೀರಿನ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿರುವ ಪ್ರದೇಶಗಳಲ್ಲಿ ಕೈಗೊಳ್ಳಬೇಕಾಗಿರುವ ಪರಿಹಾರ ಕ್ರಮಗಳ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಆರು ತಾಲ್ಲೂಕುಗಳು ಈಗಾಗಲೇ ಬರಪೀಡಿತ ತಾಲ್ಲೂಕುಗಳು ಎಂದು ಘೋಷಣೆಯಾಗಿದ್ದು, ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಪಟ್ಟಂತೆ ಈಗಾಗಲೇ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಆಯಾ ಕ್ಷೇತ್ರ ಶಾಸಕರುಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ತಾಲ್ಲೂಕು ಮಟ್ಟದ ಟಾಸ್ಕ್ಪೋರ್ಸ್ ಸಮಿತಿ ಸಭೆಯನ್ನು ಏರ್ಪಡಿಸಿ, ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲೆಲ್ಲಿ ನೀರಿನ ಮೂಲಗಳಿವೆ, ಪೈಪ್ಲೈನ್ ವಿಸ್ತರಣೆ, ಬೋರ್ವೆಲ್ಗಳ ದುರಸ್ತಿ, ಟ್ಯಾಂಕರ್ ಮೂಲಕ ಪೂರೈಕೆ ಸೇರಿದಂತೆ ಟಾಸ್ಕ್ಪೋರ್ಸ್ ಸಮಿತಿ ಸಭೆಯಲ್ಲಿ ಕೂಲಕಂಕಷವಾಗಿ ಚರ್ಚಿಸಿ, ಪರಿಹಾರ ಕಾರ್ಯ ಕುರಿತಂತೆ ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಆಗಬೇಕಿರುವ ಕಾರ್ಯಗಳ ಬಗ್ಗೆ ನಡಾವಳಿಯಲ್ಲಿ ಗೊತ್ತುಪಡಿಸಿ, ಪ್ರಸ್ತಾವನೆ ಸಲ್ಲಿಸುವ ಕಾರ್ಯ ತ್ವರಿತವಾಗಿ ಆಗಬೇಕು. ನೀರಿನ ಸಮಸ್ಯೆಯಾಗದಂತೆ ಖಾಸಗಿ ಬೋರ್ವೆಲ್ಗಳನ್ನು ಗುರುತಿಸಿಟ್ಟುಕೊಂಡಿರಬೇಕು. ಮಾಲೀಕರ ಮನವೊಲಿಸಿ ಬಾಡಿಗೆ ನಿಗದಿಪಡಿಸಬೇಕು. ಅಂತಹ ಬೋರ್ವೆಲ್ಗೆ ಅಗತ್ಯವಿದ್ದರೆ ಪೈಪ್ಲೈನ್ ಮಾಡಿಕೊಳ್ಳಬಹುದು. ಒಂದು ವೇಳೆ ನೀರು ಲಭ್ಯವಾಗದೇ ಇರುವ ಪಕ್ಷದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದು ಕೊನೆಯ ಆದ್ಯತೆಯಾಗಬೇಕು ಎಂದು ಹೇಳಿದರು.
ಚಳ್ಳಕೆರೆ ತಾ.ಪಂ ಇಒ ಮಾತನಾಡಿ, ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಅಲ್ಪಮಟ್ಟಿಗೆ ಕುಸಿದಿದೆ. ಈಗಾಗಲೆ 53 ಹಳ್ಳಿಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳು ಎಂದು ಗುರುತಿಸಲಾಗಿದೆ. 18 ಹಳ್ಳಿಗಳಿಗೆ ಖಾಸಗಿ ಬೋರ್ವೆಲ್ಗಳನ್ನು ಗುರುತಿಸಲಾಗಿದೆ. ಇದರಲ್ಲಿಯೂ ನೀರು ಕಡಿಮೆಯಾಗುವ ಸಂಭವ ಇದೆ. ಇನ್ನೂ 14 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಪೂರೈಕೆ ಮಾಡುವ ಪರಿಸ್ಥಿತಿ ಬರಬಹುದು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಪರಿಸ್ಥಿತಿ ಗಂಭೀರವಾದರೆ ಟ್ಯಾಂಕರ್ ಮುಲಕ ನೀರು ಸರಬರಾಜು ಮಾಡಿ, ಒಟ್ಟಾರೆಯಾಗಿ ಕುಡಿಯುವ ನೀರು ಪೂರೈಕೆ ಮಾಡಲೇಬೇಕು. ಪ್ರತಿ ತಾಲ್ಲೂಕಿಗೆ ತುರ್ತು ಕಾರ್ಯಗಳಿಗಾಗಿ 40 ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದರು. ಅಲ್ಲದೆ ಟ್ಯಾಂಕರ್ ಮೂಲಕ ನೀರು ಸರಬರಾಜು ಪೂರೈಕೆ ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ತುರ್ತಾಗಿ ಅಗತ್ಯವಿರುವೆಡೆ ತಹಸಿಲ್ದಾರರ ಸೂಚನೆ ಮೇರೆಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡುವವರಿಗೆ ಟೆಂಡರ್ ನಲ್ಲಿ ಅಂತಿಮವಾಗಿ ನಿಗದಿಯಾಗುವ ದರಕ್ಕೆ ಅನುಗುಣವಾಗಿ ಮೊತ್ತ ಪಾವತಿಸಲಾಗುವುದು ಎಂದರು.
ನೀರಿನ ಗುಣಮಟ್ಟ ಪರೀಕ್ಷೆ :
ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮ ಪಂಚಾಯತಿಗಳಲ್ಲಿ ಪೂರೈಸಲಾಗುವ ನೀರು, ನೀರಿನ ಸಂಗ್ರಹಾಗಾರಗಳಲ್ಲಿನ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸಬೇಕು. ನೀರು ಪೂರೈಕೆಯ ಪೈಪ್ಲೈನ್ ಮಾರ್ಗಗಗಳನ್ನು ಆಗಿಂದಾಗ್ಗೆ ಪರಿಶೀಲನೆ ನಡೆಸುತ್ತಿರಬೇಕು, ಕಲುಷಿತ ನೀರು ಕಾರಣದಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತೀವ್ರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
289 ಸಮಸ್ಯಾತ್ಮಕ ಗ್ರಾಮಗಳು:
ಮುಂಬರುವ ತಿಂಗಳುಗಳಲ್ಲಿ ಜಿಲ್ಲೆಯಲ್ಲಿ 289 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 53, ಚಿತ್ರದುರ್ಗ-44, ಹಿರಿಯೂರು-57, ಹೊಳಲ್ಕೆರೆ-53, ಹೊಸದುರ್ಗ-36 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 67 ಸಮಸ್ಯಾತ್ಮಕ ಗ್ರಾಮಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 289 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಂಭವವಿದೆ. ಈ ಸಂಖ್ಯೆಯು ದಿನದಿಂದ ದಿನಕ್ಕೆ ಬದಲಾಗುವ ಸಾಧ್ಯತೆಗಳಿವೆ. ಹಾಗಾಗಿ ಚಳ್ಳಕೆರೆ ತಾಲ್ಲೂಕಿನಲ್ಲಿ 24, ಚಿತ್ರದುರ್ಗ-1, ಹಿರಿಯೂರು-54, ಹೊಳಲ್ಕೆರೆ-13 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 78 ಸೇರಿದಂತೆ ಒಟ್ಟು 170 ಬೋರ್ವೆಲ್ಗಳನ್ನು ಒಪ್ಪಂದಕ್ಕಾಗಿ ಇಳುವರಿ ನೀಡುವ ಬೋರ್ವೆಲ್ಗಳನ್ನು ಗುರುತಿಸಲಾಗಿದೆ. ಪೈಪ್ಲೈನ್ ಮತ್ತಿತರ ತುರ್ತು ಕಾರ್ಯಗಳಿಗಾಗಿ ಪ್ರತಿ ತಾಲ್ಲೂಕಿಗೆ ತಲಾ 25 ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಹೇಳಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಗ್ರಾಮೀಣ ಕುಡಿಯುವ ನೀರು ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪಾತಪ್ಪ, ನಗರಸಭೆ ಪೌರಾಯುಕ್ತೆ ರೇಣುಕಾ ಸೇರಿದಂತೆ ತಹಶೀಲ್ದಾರ್ಗಳು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.