i
ಮುಖ್ಯಶಿಕ್ಷಕಿ ಮೇಲಿನ ದ್ವೇಷಕ್ಕೆ ಮಕ್ಕಳಿಂದ ಶೌಚ ಶುಚಿಗೊಳಿಸಿದ ಇಂಗ್ಲೀಷ್ ಟೀಚರ್ ಅಮಾನತು…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಶಾಲಾ ವಿದ್ಯಾರ್ಥಿಗಳು ಶೌಚ ಸೇರಿದಂತೆ ಇತರೆ ಸ್ವಚ್ಛಗೊಳಿಸುವ ಕೋಲಾಹಲ ತಣ್ಣಗಾಗುವ ಮೊದಲೇ ಬೆಣ್ಣೆನಗರಿಯಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿಯರು ಶೌಚಗೊಳಿಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಶಿಕ್ಷಕಿಯರ ವೈಯಕ್ತಿಕ ಜಗಳದ ಹಿನ್ನೆಲೆಯಲ್ಲಿ ವಿಡಿಯೋ ವೈರಲ್ ಆಗಿರುವುದು ಗೊತ್ತಾಗಿದೆ. ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆಯು ಶಿಕ್ಷಕಿ ಅಮಾನತುಗೊಳಿಸಿ ಆದೇಶಿಸಿದೆ.
ದಾವಣಗೆರೆ ತಾಲ್ಲೂಕಿನ ಮೆಳಕಟ್ಟೆ ಸರ್ಕಾರಿ ಹೈಸ್ಕೂಲ್ ನ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ಶೌಚ ಹಾಗೂ ಕೊಠಡಿ ಸ್ವಚ್ಚಗೊಳಿಸಿ ವಿಡಿಯೋ ವೈರಲ್ ಆಗಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ವಿದ್ಯಾರ್ಥಿಗಳನ್ನು ಸ್ವಚ್ಛಗೊಳಿಸಲು ಬಳಸಿಕೊಂಡ ಪರಿ ವಿವಾದಕ್ಕೂ ಕಾರಣವಾಗಿತ್ತು. ಆದ್ರೆ, ಈಗ ಅಸಲಿ ಸತ್ಯ ಬಯಲಾಗಿದೆ. ಇಂಗ್ಲೀಷ್ ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕಿಯ ನಡುವಿನ ಮುಸುಕಿನ ಗುದ್ದಾಟಕ್ಕೆ ವಿದ್ಯಾರ್ಥಿಗಳು ಬಲಿಪಶುವಾಗಿದ್ದಾರೆ. ಇಂಗ್ಲೀಷ್ ಶಿಕ್ಷಕಿ ಸಾವಿತ್ರಮ್ಮರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಏನಾಗಿತ್ತು..?
ಸರ್ಕಾರಿ ಪ್ರೌಢ ಶಾಲೆಯ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶಾಲೆಯ ಸ್ವಚ್ಛಗೊಳಿಸುವ ವಿಡಿಯೋ ವೈರಲ್ ಆಗಿತ್ತು. ಮಾಧ್ಯಮಗಳಲ್ಲಿಯೂ ಪ್ರಸಾರ ಆಗಿತ್ತು. ಶಾಲೆಯ ಸಮವಸ್ತ್ರದಲ್ಲಿಯೇ ಪೊರಕೆ ಹಿಡಿದು ಶೌಚಾಲಯ ಸ್ವಚ್ಚ ಮಾಡಿದ ಬಾಲಕಿಯರು ಶಾಲೆಯ ಸಮವಸ್ತ್ರ ಧರಿಸಿದ್ದರು. ಮಕ್ಕಳು ಶೌಚಾಲಯ ಸ್ವಚ್ಚ ಮಾಡುವ ವಿಡಿಯೋ ಅನ್ನು ಶಾಲಾ ಶಿಕ್ಷಕಿಯೇ ವೈರಲ್ ಆಗುವಂತೆ ನೋಡಿಕೊಂಡಿದ್ದೇ ಯಾಕೆ ಎನ್ನೋ ಕುತೂಹಲ ಕೆರಳುವಂತೆ ಮಾಡಿತ್ತು.
ಸಹಶಿಕ್ಷಕಿಯ ಮೇಲಿನ ಹಳೆಯ ದ್ವೇಷಕ್ಕೆ ತರಗತಿ ಶಿಕ್ಷಕಿ ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸಿದ್ದಾರೆ. ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಈ ಪ್ರಕರಣ ಗಮನದಲ್ಲಿಟ್ಟುಕೊಂಡು ತನ್ನ ಸಹೊದ್ಯೋಗಿ ಮೇಲೆ ಗೂಬೆ ಕೂರಿಸುವ ಷಡ್ಯಂತ್ರವನ್ನು ಶಿಕ್ಷಕಿಯೇ ರೂಪಿಸಿದ್ದು ತನಿಖೆ ವೇಳೆ ಬಯಲಾಗಿದೆ. ಇಬ್ಬರು ಶಿಕ್ಷಕಿಯರ ಶೀತಲ ಸಮರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಗ್ರಾಮಸ್ತರು ಶಿಕ್ಷಕಿಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಗೆ ದೂರು ನೀಡಿದ್ದರು. ವಿದ್ಯಾರ್ಥಿಗಳು ಪ್ರತಿಭಟನೆಯನ್ನೂ ಮಾಡಿದ್ದರು.