i
ಮಾಧ್ಯಮದವರಿಗೆ ಅಂಚೆ ಮತದಾನ ಸೌಲಭ್ಯ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಚುನಾವಣಾ ಆಯೋಗವು ಯಾವ ಮತದಾರರೂ ಮತದಾನದಿಂದ ವಂಚಿತರಾಗದಿರುವಂತೆ ಹಲವು ಕ್ರಮಗಳನ್ನು ವಹಿಸಿದೆ. ಅದರಂತೆ ಪ್ರಸಕ್ತ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಮತದಾನದ ದಿನದಂದು ಅತ್ಯಗತ್ಯ ಸೇವೆಯಲ್ಲಿ ನಿಯೋಜಿತರಾದ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ಗೈರು ಹಾಜರಿ ಅಗತ್ಯ ಸೇವೆಯಡಿ ವರ್ಗದವರಿಗೆ (Absentee Voters in Essential Service – AVES) ಅಂಚೆ ಮತಪತ್ರ ಸೌಲಭ್ಯ ಒದಗಿಸುತ್ತಿವೆ.
ಈ ಯೋಜನೆಯಡಿ 12 ಸೇವೆಗಳನ್ನು ಅತ್ಯಗತ್ಯ ಸೇವೆ ಎಂದು ಗುರುತಿಸಿದ್ದು, ಅದರಲ್ಲಿ ಮತದಾನದ ದಿನದಂದು ವರದಿಗಾರಿಕೆ ಮಾಡುವ ಭಾರತ ಚುನಾವಣಾ ಆಯೋಗ ಅನುಮೋದಿತ ಮಾಧ್ಯಮದವರನ್ನು ಅತ್ಯಗತ್ಯ ಸೇವೆಗಳಲ್ಲಿ ನಿಯೋಜಿತರಾದ ಮತದಾರರು ಎಂದು ಪರಿಗಣಿಸಿದೆ.
ಈ ಹಿನ್ನೆಲೆಯಲ್ಲಿ ಮತದಾನದ ದಿನದಂದು ತಮ್ಮ ಮತ ಕ್ಷೇತ್ರದಲ್ಲಿ ಮತದಾನ ಮಾಡಲು ಸಾಧ್ಯವಾಗದೇ ಕರ್ತವ್ಯದಲ್ಲಿ ನಿಯೋಜಿತರಾದ ಭಾರತ ಚುನಾವಣಾ ಆಯೋಗ ಅನುಮೋದಿತ ಮಾಧ್ಯಮದವರು ಮತದಾನದ ದಿನಕ್ಕೆ ಮುಂಚಿತವಾಗಿ ತಮ್ಮ ಮತ ಕ್ಷೇತ್ರದಲ್ಲಿ ಗೈರು ಹಾಜರಿ ಮತದಾರ ಹೆಸರಿನಲ್ಲಿ ಅಂಚೆ ಮತದಾನ ಮಾಡಲು ಅವಕಾಶವಿದ್ದು, ಇದನ್ನು ನಮೂನೆ 12-ಡಿ ಭರ್ತಿ ಮಾಡುವ ಮೂಲಕ ಮತ ಚಲಾಯಿಸಬಹುದಾಗಿದೆ.
ದಿನಾಂಕ:19-03-2024 ರಿಂದ 21-03-2024 ರೊಳಗೆ ಭಾರತ ಚುನಾವಣಾ ಆಯೋಗ ಅನುಮೋದಿತ ಮಾಧ್ಯಮದವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ಶಾಖೆಯ ಸಹಾಯಕ ನಿರ್ದೇಶಕಿ ಡಾ. ಕೆ.ಎನ್. ಕವನ ಅವರಿಂದ ಕಚೇರಿ ಅವಧಿಯಲ್ಲಿ ನಮೂನೆ 12-ಡಿ ಅನ್ನು ಪಡೆದು, ಭರ್ತಿ ಮಾಡಿದ ನಮೂನೆಯನ್ನು ದಿನಾಂಕ: 21-03-2024ರ ಸಂಜೆ 5.30 ಗಂಟೆ ಒಳಗಾಗಿ ಸಲ್ಲಿಸಲು ತಿಳಿಸಿದೆ.
ಸಂಬಂಧಿಸಿದ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಅಡಕವಿರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳಾದ ಡಾ. ಕೆ.ಎನ್. ಕವನ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೊಬೈಲ್ ದೂರವಾಣಿ ಸಂಖ್ಯೆ – 94808 41250, ಅವರನ್ನು ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.