![](https://www.chandravallinews.com/wp-content/uploads/2024/04/WhatsApp-Image-2024-04-03-at-4.09.07-PM-1024x577.jpeg)
i
ಶಾಸಕ ಚಂದ್ರಪ್ಪ, ಪುತ್ರ ರಘುಚಂದನ್ ಬೆಂಬಲ ಕಾರಜೋಳ ಅವರಿಗೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೇಶ ರಕ್ಷಣೆಗಾಗಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಇದಕ್ಕಾಗಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಅವರ ಪುತ್ರ ರಘು ಚಂದನ್ ಇಬ್ಬರೂ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ತಿಳಿಸಿದರು.ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಬುಧವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಪ್ಪನವರ ಪುತ್ರ ರಘುಚಂದನ್ ಯುವಕ, ಆಶಾವಾದಿ. ಸತತ ಹೋರಾಟ ಮಾಡಿಕೊಂಡು ಬಂದವರು. ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಯಾವುದೋ ಲೆಕ್ಕಾಚಾರದಲ್ಲಿ ನನಗೆ ಟಿಕೆಟ್ ನೀಡಿದರು. ನಾನು ಬೇಡ ಎಂದು ಹೇಳಿದ್ದೆ. ಆದರೆ, ಪಕ್ಷದ ರಾಷ್ಟ್ರೀಯ ನಾಯಕರು ಯಾರ ಮಾತು ಮೀರುವುದಿಲ್ಲವೋ ಅವರು ನಿಲ್ಲಲೇಬೇಕು ಎಂದಾಗ ಅನಿವಾರ್ಯವಾಗಿ ಬಂದು ನಾಮಪತ್ರ ಸಲ್ಲಿಸಿದ್ದೇನೆ ಎಂದು ತಿಳಿಸಿದರು.ನಾನು ಮತ್ತು ಚಂದ್ರಪ್ಪ ಒಂದೇ ತಟ್ಟೆಯ(ತಾಟು)ನಲ್ಲಿ ಉಂಡವರು. ಕೆಲ ಪರಿಸ್ಥಿತಿ ಹಾಗೂ ಆವೇಶದಲ್ಲಿ ಕೆಲ ಮಾತುಗಳು ಬರುತ್ತವೆ. ಅವನ್ನು ಯಾರೂ ಮನಸ್ಸಿಗೆ ತೆಗೆದುಕೊಳ್ಳುವುದು ಬೇಡ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವ ಉದ್ದೇಶದಿಂದ ಶಾಸಕರಾದ ಎಂ.ಚಂದ್ರಪ್ಪ ಹಾಗೂ ಅವರ ಪುತ್ರ ರಘುಚಂದನ್ ಇಬ್ಬರೂ ಬೆಂಬಲವಾಗಿ ನಿಂತಿದ್ದಾರೆ ಎಂದು ತಿಳಿಸಿದರು.ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಮಗನಿಗೆ ಇನ್ನೂ ವಯಸ್ಸಿದೆ. ಹಾಗಾಗಿ ಈ ಚುನಾವಣೆಯಲ್ಲಿ ಮೋದಿ ಗೆಲುವಿಗಾಗಿ ಕೆಲಸ ಮಾಡುತ್ತೇವೆ. ಯಡಿಯೂರಪ್ಪರವರ ಬಳಿ ಯಾವುದೇ ರೀತಿಯ ಒಪ್ಪಂದ ಮಾಡಿಕೊಂಡಿಲ್ಲ ಯಾವುದೇ ಷರತ್ತು ಇಲ್ಲದೆ ಚುನಾವಣೆಯಲ್ಲಿ ಸಹಕಾರ ನೀಡುತ್ತೇವೆ ಎಂದು ತಿಳಿಸಿದ್ದೇವೆ ಎಂದರು.
ಟಿಕೆಟ್ ಆಕಾಂಕ್ಷಿ ಎಂ.ಸಿ.ರಘುಚಂದನ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರಿಗೆ ಮಾತು ಕೊಟ್ಟಿದ್ದೇವೆ. ಜೀವ ಹೋದರೂ ಮಾತಿಗೆ ತಪ್ಪಲ್ಲ. ಕೊಟ್ಟ ಮಾತಿಗೆ ಬದ್ಧರಾಗಿ ಗೋವಿಂದ ಎಂ.ಕಾರಜೋಳ ಅವರ ಪರವಾಗಿ ಚುನಾವಣೆ ನಡೆಸುತ್ತೇವೆ ಎಂದರು.ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸುತ್ತೇವೆ. ಹೊರಗೊಂದು, ಒಳಗೊಂದು ಮಾಡುವುದಿಲ್ಲ. ಅವರು ಹೇಳಿದ ಕಡೆಗಳಲ್ಲಿ ಕೆಲಸ ಮಾಡುತ್ತೇನೆ. ನಾನು ರಾಜ್ಯಸಭೆ, ಪರಿಷತ್ ಆಸೆ ಇಟ್ಟುಕೊಂಡಿಲ್ಲ. ಜನರ ನಡುವೆ ಬೆಳೆದವರು. ಚುನಾವಣೆಯ ಮೂಲಕವೇ ರಾಜಕಾರಣ ಮಾಡುತ್ತೇವೆ ಎಂದು ಹೇಳಿದರು. ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕೆಟೇಶ್ ಯಾದವ್, ವಕ್ತರ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ ಮತ್ತಿತರರಿದ್ದರು.