i
ಸುಭಾಸ್ ಚಂದ್ರ ಬೋಸ್ ಪ್ರಥಮ ಪ್ರಧಾನಿ, ನಟಿ ಕಂಗನಾ ಹೇಳಿಕೆಗೆ ಖಂಡನೆ…
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ನೇತಾಜಿ ಸುಭಾಸ್ ಚಂದ್ರ ಬೋಸ್ ಭಾರತದ ಪ್ರಥಮ ಪ್ರಧಾನಿ ಎಂಬ ಬಿಜೆಪಿ ಅಭ್ಯರ್ಥಿ ಹಾಗೂ ನಟಿ ಕಂಗನಾ ರಣಾವತ್ ಅವರ ಹೇಳಿಕೆಗೆ ನೇತಾಜಿ ಅವರ ಕುಟುಂಬ ಖಂಡನೆ ವ್ಯಕ್ತಪಡಿಸಿದೆ.
ಎಕ್ಸ್ನಲ್ಲಿ ಪತ್ರಿಕಾ ವರದಿಯೊಂದನ್ನು ಶೇರ್ ಮಾಡಿರುವ ನೇತಾಜಿ ಅವರ ಮರಿ ಅಳಿಯ ಚಂದ್ರ ಕುಮಾರ್ ಬೋಸ್, “ಯಾರೂ ಕೂಡ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಾಗಿ ಇತಿಹಾಸ ತಿರುಚಬಾರದು” ಎಂದು ಹೇಳಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ “ನೇತಾಜಿ ಸುಭಾಸ್ ಚಂದ್ರ ಬೋಸ್ ಅವರು ರಾಜಕೀಯ ಚಿಂತಕರು, ಸೈನಿಕರು, ಮುತ್ಸದ್ದಿ, ದಾರ್ಶನಿಕರು ಮತ್ತು ಅವಿಭಜಿತ ಭಾರತದ ಪ್ರಥಮ ಪ್ರಧಾನಿ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಎಲ್ಲಾ ಸಮುದಾಯಗಳನ್ನು ಭಾರತೀಯರು ಎಂಬ ಅಡಿಯಲ್ಲಿ ಒಗ್ಗೂಡಿಸಬಲ್ಲ ಏಕೈಕ ನಾಯಕರಾಗಿದ್ದರು. ಅವರ ಸರ್ವರನ್ನೊಳಗೊಂಡ ಸಿದ್ಧಾಂತವನ್ನು ಅನುಸರಿಸುವುದು ಅವರಿಗೆ ತೋರಬಹುದಾದ ನಿಜವಾದ ಗೌರವ” ಎಂದಿದ್ದಾರೆ.
ಇತ್ತೀಚೆಗೆ ಟೈಮ್ಸ್ ನೌ ಚಾನೆಲ್ನಲ್ಲಿ ನಡೆದ ‘ಟೈಮ್ಸ್ ಸಮ್ಮಿಟ್’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್, “ಸ್ವತಂತ್ರ ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್” ಎಂದಿದ್ದರು. ಕಂಗನಾ ಅವರ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.