i
ಮಾದಿಗ ಸಮುದಾಯ ಒಗ್ಗಟ್ಟಿನಿಂದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರನ್ನ ಗೆಲ್ಲಿಸಿ-ಮಾಜಿ ಶಾಸಕ ಮಸ್ಕಲ್ ಆರ್.ರಾಮಯ್ಯ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೇಶದ ಭವಿಷ್ಯದ ಬಗ್ಗೆ ದೂರದೃಷ್ಟಿಯಿಟ್ಟುಕೊಂಡಿರುವ ನರೇಂದ್ರಮೋದಿ ಮೂರನೆ ಬಾರಿಗೆ ಪ್ರಧಾನಿಯಾಗಬೇಕಾಗಿರುವುದರಿಂದ ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರನ್ನುಬೆಂಬಲಿಸುವಂತೆ ಮಾಜಿ ಶಾಸಕ ಮಸ್ಕಲ್ ಆರ್.ರಾಮಯ್ಯ ಮತದಾರರಲ್ಲಿ ಮನವಿ ಮಾಡಿದರು. ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮಾಜ ಒಗ್ಗಟ್ಟಿನಿಂದ ಕೆಲಸ ಮಾಡಿ ಮಾದಿಗ ಸಮಾಜದ ನಾಯಕರು, ಸರಳ ಸಜ್ಜನರಾದ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಅವರು ಮನವಿ ಮಾಡಿದರು.
ಬಿಜೆಪಿ ಮೋದಿ ಅವರು ಅಂಬೇಡ್ಕರ್ ಅವರಿಗೆ ಹೆಚ್ಚಿನ ಆದ್ಯತೆ ನೀಡಿದರು. ಅದೇ ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಅವರನ್ನ ಚುನಾವಣೆಯಲ್ಲಿ ಎರಡು ಸಲ ಸೋಲಿಸುವ ಮೂಲಕ ಅನ್ಯಾಯ ಮಾಡಿದರು. ಮಾದಿಗ ಸಮಾಜಕ್ಕೆ ರಾಜಕೀಯವಾಗಿ ಅನ್ಯಾಯವಾಗಿದೆ. ಒಳ ಮೀಸಲಾತಿ ನೆನೆಗುದಿಗೆ ಬಿದ್ದಿದೆ. ದೇಶದಲ್ಲಿ ಮೋದಿ, ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಅವರುಗಳು ಗೆದ್ದರೆ ಮಾತ್ರ ಒಳ ಮೀಸಲಾತಿ ಜಾರಿಗೆ ಬರಲಿದೆ. ಈಗ ಕಾಂಗ್ರೆಸ್ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳನ್ನು ಪಂಚ ವಾರ್ಷಿಕ ಯೋಜನೆಯಂತೆ ಬಿಂಬಿಸುವ ಯತ್ನ ಮಾಡುತ್ತಿದ್ದಾರೆ. ಬಿಜೆಪಿ ಅನೇಕ ಜನಪರ ಕಾರ್ಯಕ್ರಮ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಜನತೆಗೆ ಕೊಟ್ಟಿರುವ ಐದು ಗ್ಯಾರೆಂಟಿಗಳು ಶಾಶ್ವತವಲ್ಲ. ದೇಶಕ್ಕಾಗಿ ಮೋದಿ ಗ್ಯಾರೆಂಟಿ. ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ನಡೆಸಿದ ನರೇಂದ್ರಮೋದಿಯಿಂದ ಯಾರಿಗೂ ತೊಂದರೆಯಾಗಿಲ್ಲ. ಕಾಂಗ್ರೆಸ್ ಪಕ್ಷ ಮಾದಿಗರನ್ನು ಕಡೆಗಣಿಸಿದೆ. ಆದ್ದರಿಂದ ಬಿಜೆಪಿಯನ್ನು ಬೆಂಬಲಿಸಲು ತೀರ್ಮಾನಿಸಿದ್ದೇವೆಂದು ಹೇಳಿದರು.ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಬಳ್ಳಾರಿ ಹೆಚ್.ಹನುಮಂತಪ್ಪ ಮಾತನಾಡಿ, ಹಿರಿಯ ಅನುಭವಿರಾಜಕಾರಣಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರವರಿಗೆ ನಮ್ಮ ಬೆಂಬಲವಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರು ಜಾಸ್ತಿಯಿದ್ದಾರೆ. ಮೀಸಲಾತಿವರ್ಗಿಕರಣದಿಂದ ಮಾದಿಗ ಸಮಾಜಕ್ಕೆ ಕಾಂಗ್ರೆಸ್ ವಂಚಿಸಿದೆ. ಮೂವತ್ತು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಬಸವರಾಜ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಮೀಸಲಾತಿಯನ್ನು ಹದಿನೈದರಿಂದ ಹದಿನೇಳಕ್ಕೆ ಹೆಚ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರು. ಸಿದ್ದರಾಮಯ್ಯ ಗೊಂದಲ ಸೃಷ್ಠಸಿದರೆ ವಿನಃ ಅನುಕೂಲ ಮಾಡಲಿಲ್ಲ. ಅದಕ್ಕಾಗಿ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರಿಗೆ ನಮ್ಮ ಮತ ಎಂದರು.
ಪರಿಶಿಷ್ಟ ಜಾತಿಯ ಐದು ಕ್ಷೇತ್ರಗಳಲ್ಲಿ ಮಾದಿಗರಿಗೆ ಎಲ್ಲಿಯೂ ಕಾಂಗ್ರೆಸ್ ಟಿಕೆಟ್ ಕೊಟ್ಟಿಲ್ಲ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಲಕ್ಷ ಮಾದಿಗರ ಮತಗಳಿವೆ. ಮುದೋಳದಲ್ಲಿ ಆರು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸಾಕಷ್ಟು ಅಭಿವೃದ್ದಿಪಡಿಸಿರುವ ಗೋವಿಂದ ಕಾರಜೋಳರನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳಿಸಿದರೆ ಮಂತ್ರಿಗಳಾಗಿ ಚಿತ್ರದುರ್ಗ ಜಿಲ್ಲೆಯನ್ನು ಅಭಿವೃದ್ದಿಪಡಿಸುತ್ತಾರೆಂಬ ವಿಶ್ವಾಸವಿದೆ. ಬಿಜೆಪಿ ಎರಡು ಟಿಕೆಟ್ ಗಳನ್ನು ಮಾದಿಗ ಸಮಾಜಕ್ಕೆ ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡಿದೆ. ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂಬುದು ನಮ್ಮ ಆಸೆ ಎಂದು ನುಡಿದರು.
ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಯಾರು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದರೆ ಬಿಜೆಪಿ ಅಭ್ಯರ್ಥಿ ಗೋವಿಂದ್ ಕಾರಜೋಳ ಮಾದಿಗ ಸಮಾಜಕ್ಕೆ ಸೇರಿದವರು ಎಂದು ತಿಳಿಸಿದರು.
ಹಿರಿಯ ಕೆಎಎಸ್ ನಿವೃತ್ತ ಅಧಿಕಾರಿ ಪುರುಷೋತ್ತಮ್ ಮಾತನಾಡಿ ಗೋವಿಂದ ಕಾರಜೋಳ ಅವರು ಯಾವುದೇ ಕಪ್ಪು ಚಿಕ್ಕೆ ಇಲ್ಲದೆ ಆಡಳಿತ ಮಾಡಿದ್ದಾರೆ. ಜಿಲ್ಲೆಯ ನೀರಾವರಿ ಯೋಜನೆಗಳು, ರಸ್ತೆ, ಹಾಸ್ಟೆಲ್ ಗಳು ಸೇರಿದಂತೆ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ದಲಿತರ ಹನ್ನೊಂದು ಸಾವಿರ ಕೋಟಿ ರೂಪಾಯಿ ಹೆಚ್ಚಿನ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ಯ ಯೋಜನೆಗಳಿಗೆ ಬಳಕೆ ಮಾಡಿದ್ದಾರೆ ಎಂದು ದೂರಿದರು.
ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಉದ್ಯೋಗ ಸೃಷ್ಟಿಸಲು ಗೋವಿಂದ ಕಾರಜೋಳ ಅವರು ಚಿಂತನೆ ಮಾಡಿದ್ದಾರೆ. ಜಾತಿಗೆ ಅನುಗುಣವಾಗಿ ಅಭಿವೃದ್ಧಿಗೆ ಆದ್ಯತೆ ನೀಡಲಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಿಸುವ ಸಾಮರ್ಥ್ಯವನ್ನು ಗೋವಿಂದ ಕಾರಜೋಳ ಅವರು ಹೊಂದಿದ್ದಾರೆ. ಚುನಾವಣೆಯಲ್ಲಿ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಮತ ಹಾಕಿ ಗೆಲ್ಲಿಸಿದರೆ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಮಾನ ಸಿಗುವ ಸಾಧ್ಯತೆ ಇದೆ. ಮುಂದಿನ ಐದು ವರ್ಷಗಳಲ್ಲಿ ಸಮಗ್ರ ಅಭಿವೃದ್ಧಿ ಮಾಡಲಿದ್ದಾರೆಂದು ಅವರು ತಿಳಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಜಗದೀಶ್, ಪುರುಷೋತ್ತಮ ಪತ್ರಿಕಾಗೋಷ್ಠಿಯಲ್ಲಿದ್ದರು.