i
ಗಣಿಗಾರಿಕೆ ನಿಷೇಧಕ್ಕೆ ಗ್ರಾಮಸ್ಥರ ಆಗ್ರಹ…
ಚಂದ್ರವಳ್ಳಿ ನ್ಯೂಸ್, ಹೊಸನಗರ:
ತಾಲ್ಲೂಕಿನ ನಗರ ಹೋಬಳಿ ಕುಂಭತ್ತಿ ಗ್ರಾಮದ ಸ.ನಂ.5ರಲ್ಲಿ ಇಬ್ಬರು ಜಂಟಿಯಾಗಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆಯಿಂದ ಗ್ರಾಮಸ್ಥರಿಗೆ ಪ್ರತೀದಿನವೂ ಒಂದಲ್ಲ ಒಂದು ಸಮಸ್ಯೆಯಾಗುತ್ತಿದ್ದು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವಂತಹ ಸ್ಥಿತಿ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಿಗೆ ದೂರು ಕೊಟ್ಟರೂ ಈವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನದಿಂದ ದೂರವೇ ಉಳಿದು ಚುನಾವಣೆ ಬಹಿಷ್ಕರಿಸುವುದಾಗಿ ನಿರ್ಧರಿಸಿರುವ ಕುಂಭತ್ತಿ ಗ್ರಾಮಸ್ಥರು ತಹಶೀಲ್ದಾರ್ ಮೂಲಕ ಇಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ಕಾರಣಗಿರಿಯ ಬಸ್ ನಿಲ್ದಾಣದಲ್ಲಿ ಗಣಿಗಾರಿಕೆ ವಿರೋಧಿಸಿ ಸಾಮೂಹಿಕ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಗಣಿಗಾರಿಕೆ ವಿರೋಧಿ ಭಿತ್ತಿಪತ್ರಗಳನ್ನು ಹಿಡಿದು ಗಣಿಗಾರಿಕೆಯ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೇ, ತಮಗೆ ನ್ಯಾಯ ದೊರೆಯುವವರೆಗೂ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಿದರು.