i
ಗಮನ ಸೆಳೆಯುತ್ತಿರುವ ಚುನಾವಣೆ ಮಾಡೆಲ್: 100 ರಷ್ಟು ಮತದಾನ ಮಾಡಲು ಮನವಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಮತದಾರರು ಮತಗಟ್ಟೆಗಳಿಗೆ ಬಂದು ಮತ ಚಲಾವಣೆ ಮಾಡುವ ಮೂಲಕ ಶೇ.೧೦೦ ರಷ್ಟು ಮತದಾನ ಆಗುವಂತೆ ಸಹಕರಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಮನವಿ ಮಾಡಿದರು.
ಶಿವಮೊಗ್ಗ ನಗರದ ಶಿವಪ್ಪನಾಯಕ ಮಾರುಕಟ್ಟೆಯ ಸಿಟಿ ಸೆಂಟರ್ ಮಾಲ್ನಲ್ಲಿ ಏ.೨೮ ರ ಸಂಜೆ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಶಿವಮೊಗ್ಗ ಮತದಾನ ಜಾಗೃತಿ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಸ್ಥಾಪಿಸಲಾಗಿರುವ ಚುನಾವಣಾ ಮಾಡೆಲ್ ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಮೊಗ್ಗ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆ ಇದೆ. ಮತದಾನ ಪ್ರಮಾಣ ಹೆಚ್ಚಬೇಕು. ಬೆಂಗಳೂರಿನಲ್ಲಿ ಶೇಕಡ ೫೦ ಕ್ಕಿಂತ ಕಡಿಮೆ ಮತದಾನ ನಡೆದಿದ್ದು ಆ ರೀತಿ ನಮ್ಮ ಶಿವಮೊಗ್ಗದಲ್ಲಿ ಆಗಬಾರದು. ಮತ ಚಲಾಯಿಸುವ ಮುಖಾಂತರ ದೇಶದ ಅಭಿವೃದ್ಧಿಯಲ್ಲಿ ನಾವೆಲ್ಲ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇಕಡ ೭೬ ರಷ್ಟು ಮತದಾನ ನಡೆಡಿದ್ದು, ನಗರ ಪ್ರದೇಶದಲ್ಲಿ ಶೇಕಡಾ ೬೦ ರಷ್ಟು ಮಾತ್ರ ಮತದಾನ ನಡೆದಿದೆ. ನಗರ ಪ್ರದೇಶದ ಜನರು ಮತದಾನ ಮಾಡುವಲ್ಲಿ ಆಸಕ್ತಿ ಕಡಿಮೆ ತೋರುತ್ತಿದ್ದಾರೆ. ದೇಶದ ಅಭಿವೃದ್ಧಿ ಮತ್ತು ಜನರ ಜೀವನ ರೂಪಿಸುವುದಕ್ಕೆ ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜ್ಞಾವಂತನ ಕರ್ತವ್ಯವಾಗಿದ್ದು ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದರು.
ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹಮದ್ ಪರ್ವೀಜ್ ಮಾತನಾಡಿದರು.