i
13 ವರ್ಷದ ದಲಿತ ಬಾಲಕಿಯ ಸಜೀವ ದಹನ…
ಚಂದ್ರವಳ್ಳಿ ನ್ಯೂಸ್, ಲಖ್ನೊ :
ಬಯಲು ಶೌಚಾಲಯಕ್ಕೆ ತೆರಳಿದ್ದ 13 ವರ್ಷದ ದಲಿತ ಬಾಲಕಿಯನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಹರಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ.
ಬಲರಾಂಪುರ್ ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ 13 ವರ್ಷದ ದಲಿತ ಬಾಲಕಿಯನ್ನು ಸುಟ್ಟು ಹಾಕಲಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, ಬಾಲಕಿ ಶುಕ್ರವಾರ ಸಂಜೆ ತನ್ನ ಗ್ರಾಮದ ಬಳಿಯ ಹೊಲಕ್ಕೆ ಮಲವಿಸರ್ಜನೆಗೆ ಹೋಗಿದ್ದಳು. ಒಂದು ಗಂಟೆಯಾದರೂ ಮನೆಗೆ ವಾಪಸ್ ಬಾರದೆ ಇದ್ದಾಗ ಮನೆಯವರು ಆಕೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇದೇ ವೇಳೆ ಸಮೀಪದ ಹೊಲಕ್ಕೆ ಬೆಂಕಿ ಬಿದ್ದಿದೆ ಎಂದು ಕೆಲ ಗ್ರಾಮಸ್ಥರು ತಿಳಿಸಿದ್ದಾರೆ. ಅಲ್ಲಿಗೆ ಅವರು ತೆರಳಿ ನೋಡಿದಾಗ ಅಲ್ಲಿ ಬಾಲಕಿಯ ಸುಟ್ಟು ಕರಕಲಾದ ದೇಹ ಪತ್ತೆಯಾಗಿದೆ. ಆಕೆಯ ಸುಟ್ಟ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರು ಭಾರತೀಯ ದಂಡ ಸಂಹಿತೆ (IPC) ಮತ್ತು SC/ST ಕಾಯಿದೆಯ ಸಂಬಂಧಿತ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಪ್ರಾಪ್ತ ಬಾಲಕಿಗೆ ಹೇಗೆ ಮತ್ತು ಏಕೆ ಬೆಂಕಿ ಹಚ್ಚಲಾಗಿದೆ ಮತ್ತು ಆಕೆಯ ಹತ್ಯೆಯ ಹಿಂದಿನ ಉದ್ದೇಶವೇನು ಎಂದು ತನಿಖೆಯ ನಂತರ ಬಯಲಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.