i
ರಾಜ್ಯದ 14 ಕ್ಷೇತ್ರಗಳಲ್ಲೂ ಬಹುತೇಕ ಶಾಂತಿಯುತ ಮತದಾನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೇ-07 ರಂದು 3ನೇ ಹಂತದ ಲೋಕಸಭೆ ಸಾರ್ವತ್ರಿಕ ಚುನಾವಣೆ ನಡೆದಿದ್ದು ದೇಶದ 11 ರಾಜ್ಯ ಮತ್ತು ಕೇಂದ್ರಾಡಳಿತದ ಪ್ರದೇಶಗಳ 93 ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ಆರಂಭವಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ಶಾ ಗುಜರಾತ್ನ ಅಹಮದಾಬಾದ್ನಲ್ಲಿ ಮತದಾನ ಮಾಡಿದರು.
ಮೂರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಸುಮಾರು 120 ಮಹಿಳೆಯರು ಸೇರಿದಂತೆ 1,300ಕ್ಕೂ ಹೆಚ್ಚು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 8.39 ಕೋಟಿ ಮಹಿಳೆಯರು ಸೇರಿದಂತೆ 17.24 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದು, 18.5 ಲಕ್ಷ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 1.85 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.ದೇಶಾದ್ಯಂತ 3ನೇ ಹಂತದ ಮತದಾನ ನಡೆದಿದ್ದರೆ ಕರ್ನಾಟಕ ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಚುನಾವಣೆ ನಡೆದಿದೆ. ಮುಂಜಾನೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದ್ದು ಎಲ್ಲೆಡೆ ಬಿರುಸಾಗಿ ಮತದಾನ ನಡೆದಿದೆ. ಮಧ್ಯಾಹ್ನ ಬಿಸಿಲು ತಾಪದಿಂದಾಗಿ ಮತದಾರರು ಬೆಳಗ್ಗೆಯೇ ಮತ ಹಾಕಲು ಧಾವಿಸಿದರು. ಕರ್ನಾಟಕದ 14 ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.54.20 ರಷ್ಟು ಮತದಾನವಾಗಿತ್ತು. ಈ ಪೈಕಿ ಚಿಕ್ಕೋಡಿಯಲ್ಲಿ ಅತಿ ಹೆಚ್ಚು ಶೇ.59.65, ಹಾವೇರಿಯಲ್ಲಿ ಶೇ.58.45, ಗುಲ್ಬರ್ಗದಲ್ಲಿ ಅತಿ ಕಡಿಮೆ ಶೇ.47.67ರಷ್ಟು ಮತದಾನವಾಗಿತ್ತು. ಸಂಜೆ 5 ಗಂಟೆವರೆಗೆ, ಒಟ್ಟಾರೆ ಮತದಾನದ ಪ್ರಮಾಣ ಶೇ.66.05 ರಷ್ಟು ಮತದಾನವಾಗಿತ್ತು. ಚಿಕ್ಕೋಡಿಯಲ್ಲಿ ಗರಿಷ್ಠ 72.75 ರಷ್ಟು ಮತದಾನವಾಗಿದ್ದರೆ ಗುಲ್ಬರ್ಗದಲ್ಲಿ 57.20 ರಷ್ಟು ಕಡಿಮೆ ಮತದಾನವಾಗಿತ್ತು.
ಕೆನರಾ ಲೋಕಸಭಾ ಕ್ಷೇತ್ರದ ಕಿತ್ತೂರು ತಾಲೂಕಿನ ನೇಸರಗಿ ಗ್ರಾಮದ ಮತಗಟ್ಟೆಯಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಮತದಾರರಿಲ್ಲದೆ ಬಣಗುಡುತ್ತಿತ್ತು. ತಾಪಮಾನ ಏರಿಕೆಯಿಂದಾಗಿ ಮತದಾರರು ಈ ಸಮಯದಲ್ಲಿ ಮನೆಯಿಂದ ಹೊರಗೆ ಬಂದಿಲ್ಲ ಎನ್ನಲಾಗಿದೆ. ಮಧ್ಯಾಹ್ನ 3 ಗಂಟೆಯವರೆಗೆ ಗ್ರಾಮದ ಒಂಬತ್ತು ಮತಗಟ್ಟೆಗಳಲ್ಲಿ ಶೇ.50ರಷ್ಟು ಮತದಾನವಾಗಿದೆ.
ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಮತಗಟ್ಟೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಗೂ ಕಲಾವಿದೆ ಮಂಜಮ್ಮ ಜೋಗತಿ ಮತ ಚಲಾಯಿಸಿದರು. ಕೆಲವು ಕಡೆ ಆರಂಭದಲ್ಲೇ ಮತಯಂತ್ರಗಳು ಕೈಕೊಟ್ಟವು. ತಂತ್ರಜ್ಞರು ಸರಿಪಡಿಸಿದ ಬಳಿಕ ಮತದಾನ ಮುಂದುವರಿಯಿತು. ನವದುರ್ಗೆಯಯ ಮೊದಲ ಮತ, ದಿವ್ಯಾಂಗ ಯುವತಿಯ ಮೊದಲ ಮತ ಹೀಗೆ ಕೆಲವೆಡೆ ವಿಶೇಷತೆಗಳು ಕಂಡುಬಂದವು. ಕಾರವಾರ ಸೇಂಟ್ ಮೈಕಲ್ ಶಾಲೆಯ ಮತಗಟ್ಟೆ ಸಂಖ್ಯೆ 107ರಲ್ಲಿ ಮಷಿನ್ ಸಮಸ್ಯೆಯಿಂದ ಮತದಾನ ಒಂದು ಘಂಟೆ ವಿಳಂಬವಾಯಿತು. ಮೂರು ಯಂತ್ರ ಬದಲಿಸಿದ ಬಳಿಕ ಮತಯಂತ್ರ ಸರಿಯಾಯಿತು.ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಿತು.
14 ಕ್ಷೇತ್ರಗಳಲ್ಲಿ 28,269 ಮತಗಟ್ಟೆ ಸ್ಥಾಪಿಸಿದ್ದು, ಬಹುತೇಕ ಶಾಂತಿಯುತ ಚುನಾವಣೆ ನಡೆದಿದೆ. ಸುಮಾರು 40 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಮತದಾನ ಕೇಂದ್ರದಲ್ಲಿ ಮತದಾರರ ಅನುಕೂಲಕ್ಕಾಗಿ ಕುಡಿಯುವ ನೀರು ಸೇರಿ ಅಗತ್ಯ ವ್ಯವಸ್ಥೆ ಮಾಡಲಾಗಿದ್ದು, ಮತಗಟ್ಟೆಗಳ ಸುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವನ್ನು ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಏರ್ಪಡಿಸಿತ್ತು.ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದರೆ, ಬಿಎಸ್ಪಿ 9, ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು 23, ಸ್ವತಂತ್ರ ಅಭ್ಯರ್ಥಿಗಳು 117 ಸೇರಿ ಒಟ್ಟು 227 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಇದರಲ್ಲಿ 206 ಪುರುಷ, 21 ಮಹಿಳಾ ಅಭ್ಯರ್ಥಿಗಳಿದ್ದಾರೆ. ಈ ಕ್ಷೇತ್ರಗಳಲ್ಲಿ 2,59,52,958 ಮತದಾರರಿದ್ದು, 1,29,48,978 ಪುರುಷ, 1,29,64,570 ಮಹಿಳಾ ಹಾಗೂ 1,945 ತೃತೀಯ ಲಿಂಗಿ ಮತದಾರರು ಇದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಕಡಿಮೆ 16, 41,156 ಮತದಾರರಿದ್ದರೆ, ಅತಿ ಹೆಚ್ಚು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 20,98,202 ಮತದಾರರಿದ್ದಾರೆ.