"ನಿಮ್ಮ ಸೀರೆ ಚಕ್ರಕ್ಕೆ ಸಿಲುಕಲಿದೆ": ಬೈಕ್ ಸವಾರರನ್ನು ವಂಚಿಸಿ ಸರಗಳ್ಳತನ ಮಾಡುತ್ತಿದ್ದ ಮೂವರ ಬಂಧನ
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಸರಗಳ್ಳರು ಸಾರ್ವಜನಿಕರನ್ನು ವಂಚಿಸಲು ಹೊಸ ತಂತ್ರ ಕಂಡುಕೊಂಡಿದ್ದು, "ನಿಮ್ಮ ಸೀರೆ ದ್ವಿಚಕ್ರ ವಾಹನದ ಚಕ್ರಕ್ಕೆ ಸಿಲುಕಿಕೊಳ್ಳಲಿದೆ" ಎಂದು ಹೆದರಿಸಿ ಸರಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ: ಆಗಸ್ಟ್ 18ರಂದು ಚನ್ನಗಿರಿ ತಾಲೂಕಿನ ಹಿರೇವುಡಾ ಗ್ರಾಮದ ನಿವಾಸಿ ಲತಾ (54) ಅವರು ತಮ್ಮ ಪತಿಯೊಂದಿಗೆ ಬೈಕ್‌ನಲ್ಲಿ ಭದ್ರಾವತಿಗೆ ತೆರಳಿ ವಾಪಸ್ ಮನೆಗೆ ಮರಳುತ್ತಿದ್ದರು. ಈ ವೇಳೆ ಮೂವರು ಕಳ್ಳರು ದ್ವಿಚಕ್ರ ವಾಹನದಲ್ಲಿ ಇವರನ್ನು ಹಿಂಬಾಲಿಸಿಕೊಂಡು ಬಂದು, "ಸೀರೆ ಬೈಕ್ ಚಕ್ರಕ್ಕೆ ಸಿಲುಕಿ ಬೀಳುತ್ತೀರಿ" ಎಂದು ವಾಹನವನ್ನು ನಿಲ್ಲಿಸಿದ್ದಾರೆ. ಸೀರೆ ಸರಿಮಾಡಿಕೊಳ್ಳಲು ಹತ್ತಿರ ಬಂದಾಗ, ಲತಾ ಅವರ ಕೊರಳಿನಲ್ಲಿದ್ದ 45 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಪತಿಯ ಸಮಯಪ್ರಜ್ಞೆ, ಗ್ರಾಮಸ್ಥರ ಸಾಹಸ:
ಸರಗಳ್ಳತನ ನಡೆದು ಕಳ್ಳರು ಪರಾರಿಯಾಗುತ್ತಿದ್ದಂತೆ, ಲತಾ ಅವರ ಪತಿ ಸಮಯಪ್ರಜ್ಞೆ ಮೆರೆದು ಕಳ್ಳರು ಚಲಿಸುತ್ತಿದ್ದ ಮುಂದಿನ ಗ್ರಾಮದ ನಿವಾಸಿಗಳಿಗೆ ತಕ್ಷಣ ಮಾಹಿತಿ ರವಾನಿಸಿದ್ದಾರೆ. ಮಾರ್ಗಮಧ್ಯೆ ಕಳ್ಳರು ಬರುತ್ತಿದ್ದಂತೆ ಜಾಗರೂಕರಾಗಿದ್ದ ಗ್ರಾಮಸ್ಥರು ಓರ್ವ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೂವರು ಆರೋಪಿಗಳ ಬಂಧನ, ₹3 ಲಕ್ಷ ಮೌಲ್ಯದ ಚಿನ್ನ ವಶ:
ಸಾರ್ವಜನಿಕರ ನೆರವಿನಿಂದ ತನಿಖೆ ಚುರುಕುಗೊಳಿಸಿದ ಚನ್ನಗಿರಿ ಠಾಣೆ ಪೊಲೀಸರು ಪ್ರಕರಣದ ಮೂವರೂ ಆರೋಪಿಗಳಾದ ಸುನೀಲ್ ನಾಯ್ಕ್, ದಿನೇಶ್ ನಾಯ್ಕ್ ಹಾಗೂ ಮತ್ತೊಬ್ಬ ಸುನೀಲ್ ನಾಯ್ಕ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆ ಎಸ್‌ಪಿ ಶೇಖರ್ ಹೆಚ್.ಟಿ ಅವರು ಮಾಹಿತಿ ನೀಡಿ, "ಬಂಧಿತ ಆರೋಪಿಗಳು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಮೂಲದವರಾಗಿದ್ದು, ಸಂತೇಬೆನ್ನೂರಿನಲ್ಲಿ ಕೆಲಸ ಮಾಡುತ್ತಿದ್ದರು. ಬೇಗ ಹಣ ಗಳಿಸುವ ದುರುದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ. ಬಂಧಿತರಿಂದ ₹3 ಲಕ್ಷ ಮೌಲ್ಯದ 45 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.



