ಹಂಪಿಯಲ್ಲಿ ಕರುಣಾಜನಕ ಘಟನೆ: ತುಂಗಭದ್ರಾ ನದಿಯಲ್ಲಿ ಮುಳುಗಿ ತಾಯಿ-ಮಗಳು ಸಾವು
ಚಂದ್ರವಳ್ಳಿ ನ್ಯೂಸ್, ಹೊಸಪೇಟೆ:
ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಗೆ ಪ್ರವಾಸಕ್ಕೆ ಬಂದಿದ್ದ ಕುಟುಂಬವೊಂದರಲ್ಲಿ ತೀವ್ರ ಶೋಕ ಆವರಿಸಿದ್ದು, ತುಂಗಭದ್ರಾ ನದಿಯ ನೀರಿನಲ್ಲಿ ಮುಳುಗಿ ತಾಯಿ ಮತ್ತು ಮಗಳು ಮೃತಪಟ್ಟ ದಾರುಣ ಘಟನೆ ಶನಿವಾರ ಸಂಭವಿಸಿದೆ.
ಆಂಧ್ರಪ್ರದೇಶದ ಕರ್ನೂಲ್ ಮೂಲದ ಶಾಹೀನ್ (೩೮) ಮತ್ತು ಅವರ ಪುತ್ರಿ ಯಾಸ್ಮೀನ್ (೧೩) ಮೃತಪಟ್ಟ ದುರ್ದೈವಿಗಳು.
ಘಟನೆಯ ವಿವರ: ಹಂಪಿಯ ಐತಿಹಾಸಿಕ ತಾಣಗಳನ್ನು ವೀಕ್ಷಿಸಲು ಬಂದಿದ್ದ ಈ ಕುಟುಂಬವು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ನೀರಿಗೆ ಇಳಿದಿತ್ತು.
ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಲುಕಿದ ಇಬ್ಬರೂ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ನುರಿತ ಈಜುಗಾರರ ನೆರವಿನಿಂದ ಮೃತದೇಹಗಳಿಗಾಗಿ ನದಿಯಲ್ಲಿ ಸುದೀರ್ಘ ಶೋಧ ಕಾರ್ಯ ನಡೆಸಿದ್ದಾರೆ. ಈ ಸಂಬಂಧ ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



