ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕೈಗಾರಿಕಾ ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ಜಪಾನ್ ಪ್ರವಾಸದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ನೇತೃತ್ವದ ನಿಯೋಗಕ್ಕೆ ಮತ್ತೊಂದು ಮಹತ್ವದ ಯಶಸ್ಸು ಲಭಿಸಿದೆ.
ಜಪಾನ್ನ ಪ್ರಮುಖ ಎಲೆಕ್ಟ್ರಾನಿಕ್ಸ್ ತಯಾರಿಕಾ ಸಂಸ್ಥೆಯಾದ ‘ಲಿಯೋ ಎಲೆಕ್ಟ್ರಾನಿಕ್ಸ್’ (Leo Electronics) ಕರ್ನಾಟಕದಲ್ಲಿ ₹500 ಕೋಟಿ ಬಂಡವಾಳ ಹೂಡಿಕೆ ಮಾಡಲು ರಾಜ್ಯ ಸರ್ಕಾರದೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.
ಜಪಾನ್ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕಂಪನಿಯ ಹಿರಿಯ ಪ್ರತಿನಿಧಿಗಳೊಂದಿಗೆ ಸಚಿವ ಎಂ.ಬಿ. ಪಾಟೀಲ್ ಫಲಪ್ರದ ಮಾತುಕತೆ ನಡೆಸಿದರು.
ಭಾರತದಲ್ಲಿ ತನ್ನ ಉತ್ಪಾದನಾ ನೆಲೆಯನ್ನು ಸ್ಥಾಪಿಸಲು ಮುಂದಾಗಿರುವ ಲಿಯೋ ಎಲೆಕ್ಟ್ರಾನಿಕ್ಸ್, ರಾಜ್ಯದ 10 ಎಕರೆ ಪ್ರದೇಶದಲ್ಲಿ ಒಟ್ಟು ಮೂರು ಹಂತಗಳಲ್ಲಿ ಈ ಹೂಡಿಕೆ ಮಾಡಲು ಉದ್ದೇಶಿಸಿದೆ. ಈ ಯೋಜನೆಯ ಅನುಷ್ಠಾನದಿಂದ ರಾಜ್ಯದ ಸುಮಾರು 500 ರಿಂದ 800 ಮಂದಿಗೆ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ (ನಿಖರ ಉತ್ಪಾದನೆ) ಕ್ಷೇತ್ರದಲ್ಲಿ ಈ ಹೂಡಿಕೆಯು ಕರ್ನಾಟಕದ ಎಲೆಕ್ಟ್ರಾನಿಕ್ಸ್ ಮತ್ತು ಸುಧಾರಿತ ಉತ್ಪಾದನಾ ವಲಯಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯೋಜನೆಯು ಶೀಘ್ರವಾಗಿ ಕಾರ್ಯರೂಪಕ್ಕೆ ಬರಲು ಅಗತ್ಯವಿರುವ ಭೂಮಿ, ಮೂಲಸೌಕರ್ಯ, ತ್ವರಿತ ಅನುಮತಿಗಳು ಹಾಗೂ ಸರ್ಕಾರದ ಪ್ರೋತ್ಸಾಹಕಗಳನ್ನು ಒದಗಿಸುವ ಮೂಲಕ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಜಾಗತಿಕ ಹೂಡಿಕೆಗಳಿಗೆ ಕರ್ನಾಟಕವೇ ಅತ್ಯಂತ ನೆಚ್ಚಿನ ತಾಣ ಎಂಬುದಕ್ಕೆ ಈ ಒಪ್ಪಂದವು ಮತ್ತೊಂದು ಬಲವಾದ ಮನ್ನಣೆಯಾಗಿದೆ. ಇದೇ ಸಂದರ್ಭದಲ್ಲಿ, 2027ರಲ್ಲಿ ರಾಜ್ಯದಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಜಾಗತಿಕ ಹೂಡಿಕೆದಾರರ ಸಮಾವೇಶ’ದಲ್ಲಿ ಭಾಗವಹಿಸುವಂತೆ ಲಿಯೋ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ನಾಯಕತ್ವಕ್ಕೆ ಸಚಿವ ಎಂ.ಬಿ. ಪಾಟೀಲ್ ಅಧಿಕೃತ ಆಹ್ವಾನ ನೀಡಿದ್ದಾರೆ.




