Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕದನ ವಿರಾಮವೇ? ವಧೆನೆ ಆರಾಮವೇ? – ಜಾಗತಿಕ ರಾಜಕೀಯದ ಕಪಟ ಮುಖವಾಡ

Advertisement
Advertisement

ಚಂದ್ರವಳ್ಳಿ ನ್ಯೂಸ್, ಮೈಸೂರ್:
ಕದನ ವಿರಾಮವೇ
? ವಧೆನೆ ಆರಾಮವೇ? – ಜಾಗತಿಕ ರಾಜಕೀಯದ ಕಪಟ ಮುಖವಾಡ….
"ಜಾಗತಿಕ ರಾಜಕೀಯದ ಮೋಸವನ್ನು ಅರಿತು, ಸ್ವತಂತ್ರ ನಿಲುವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ.‌‌ಇತರರ ಮೇಲೆ ಅವಲಂಬನೆ ಕಡಿಮೆ ಮಾಡಿ, ಸ್ವಾವಲಂಬನೆಯ ದಾರಿಯಲ್ಲಿ ನಡೆಯುವುದು ದೇಶದ ಭದ್ರತೆಯ ಮೂಲ."

ಆತ್ಮದೊಳಗೆ ವಿಷವಿಟ್ಟು ಗುಟ್ಟು
ಕದನ ವಿರಾಮ ಪ್ರೇಮ ತೊಟ್ಟು
ವಧನಕಾರ ಆರಾಮ ಬರಗೆಟ್ಟು
ಗತಿಗೆಟ್ಟ ಮಧ್ಯವರ್ತಿ ಮತಿಗೆಟ್ಟ..

ಭೂಮಂಡಲ ನಮ್ಮಿಂದ ಓಂಕಾರದ ಧ್ವನಿಯಲ್ಲಿ ಮೆರೆಯಬೇಕಾದುದು. ಆದರೆ ಕೃತಜ್ಞತೆ ಇಲ್ಲದ ನರಮಾನವನು ಇಡೀ ಭೂಮಂಡಲವನ್ನೇ ಬೆಂಕಿ ಯಲ್ಲಿ ಕುದಿಯುವಂತೆ ಮಾಡುತ್ತಿದ್ದಾನೆ. ತನ್ನ ದುರಾಸೆಯ ಫಲವಾಗಿ ಕೃತಕವಾಗಿ ಸೃಷ್ಟಿಸಲ್ಪಟ್ಟ ದ್ವೇಷ, ಮತಾಂಧತೆ ಮತ್ತು ಓಂಕಾರದ ಮದ ಹೊಂದಿರುವ ರಾಷ್ಟ್ರಗಳ ನಡುವಿನ ಈ ಯುದ್ಧಗಳು ಅದೆಷ್ಟೋ ಸಿರಿ ಸಂಪತ್ತುಗಳನ್ನು, ಅದೆಷ್ಟೋ ಜೀವಜಂತುಗಳನ್ನು ಮರಣಹೋಮವಾಗಿಸುತ್ತಿವೆ.

ತಮಗೊಂದು ಸೋಲನ್ನೂ ಒಪ್ಪಿಕೊಳ್ಳಲಾಗದ ಈ ರಾಷ್ಟ್ರಗಳು ಭಯ ಭೀತಗೊಂಡು,ದಿಕ್ಕುತೋಚದೆ, ಗತಿಗೇಟ್ಟ ದೇಶವೊಂದನ್ನು ಮಧ್ಯವರ್ತಿಯಾಗಿ ಬಳಸಿಕೊಳ್ಳಲು ಹಾತೊರೆಯುತ್ತಿವೆ. ಕದನ ವಿರಾಮವೆಂಬುದನ್ನು ಘೋಷಿಸಿದರೂ, ಅದು ವಾಸ್ತವದಲ್ಲಿ ವಧನ ಆರಾಮವಾಗಿ ಮುಂದು ವರಿಯುತ್ತಿದೆ.
ಇದು ಯಾವ ಕದನ ವಿರಾಮ ವಿಧಾನ?:

ಇಂತಹ ಬದ್ಧತೆ ಇಲ್ಲದ ರಾಷ್ಟ್ರಗಳ ನಡುವಿನ ರಾಜಕೀಯದಿಂದ ಜಗತ್ತು ಇಕ್ಕಟ್ಟಿಗೆ ಸಿಲುಕಿದೆ. ನಾಳೆ ನಡೆಯಲಿರುವ Iran ಮತ್ತು United States ನಡುವಿನ ಒಪ್ಪಂದ ಪಕ್ಕದ ರಾಷ್ಟ್ರದಲ್ಲಿ ಏನಾಗುತ್ತದೆ ಎಂಬುದು ಕುತೂ ಹಲಕಾರಿ.ಕೆಲವರು ಹೇಳುವಂತೆ, ಇರಾನ್ ವಿಧಿಸಿರುವ ಶರತ್ತುಗಳನ್ನು ಒಪ್ಪಿಕೊಳ್ಳದ ದುರಹಂಕಾರಿ ಅಮೆರಿಕ ಕ್ಷಣಕ್ಕೊಂದು ಆಟ ಆಡುತ್ತಾ, ಮನಸ್ಸಿಗೆ ತೋಚಿದಂತೆ ನಾಲಿಗೆ ಹಿಡಿತವಿಲ್ಲದೆ ಮಾತುಗಳನ್ನು ಉಗುಳುತ್ತಿದೆ. ಮತ್ತೊಂದೆಡೆ, ಈಗಾಗಲೇ ಸಾಕಷ್ಟು ಹಾನಿಯನ್ನು ಅನುಭವಿಸಿರುವ ಇರಾನ್ ಕೂಡ ಅಮೆರಿಕದ ಶರತ್ತುಗಳನ್ನು ಖಂಡಿತವಾಗಿ ಒಪ್ಪಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ.

ಮತಿ ಇಲ್ಲದ ಆಡಳಿತದ ಮೇಲೆ ಎಲ್ಲಾ ಆರೋಪಗಳನ್ನು ಹೊರಿಸಿ, ಸುಮ್ಮನೆ ಕಲಹವನ್ನು ಮುಂದುವರಿಸಲು ಮತ್ತೆ ಮುಂದಿನ ಸುತ್ತು, ಇನ್ನೊಂದು ಸುತ್ತು ಎಂದು ನಾಟಕವಾಡಿ ತಲೆ ತಪ್ಪಿಸಿಕೊಳ್ಳುವ ಒಂದು ಉಲ್ಲಾಸ ಸಭೆಯಾಗಿ ಇದು ಮಾರ್ಪಡುತ್ತದೆಯೇ ಹೊರತು, ಪರಿಪೂರ್ಣವಾಗಿ ಒಪ್ಪಿಗೆಯಾದ ಒಪ್ಪಂದವಾಗುವ ಸಾಧ್ಯತೆ ಕಡಿಮೆ ಎಂಬ ಭಾವನೆ ಮೂಡುತ್ತದೆ.

ಜಗತ್ತಿನ ರಾಜಕೀಯ ವೇದಿಕೆಯಲ್ಲಿ ಕದನ ವಿರಾಮಎಂಬ ಪದ ಶಾಂತಿಯ ಸಂಕೇತವೆಂದು ಘೋಷಿಸಲ್ಪಡುತ್ತದೆ, ಆದರೆ ನೆಲದ ವಾಸ್ತವಿಕತೆ ಅದಕ್ಕೆ ವಿರುದ್ಧವಾಗಿ ಕಾಣುತ್ತದೆ.   ಅಮೇರಿಕ ಮತ್ತು ಇರಾನ್ ನಡುವಿನ ಸಂಘರ್ಷವು ಈ ಕಪಟದ ಸ್ವರೂಪವನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಮಾತಿನಲ್ಲಿ ಶಾಂತಿ, ಕಾರ್ಯದಲ್ಲಿ ಯುದ್ಧ ಎನ್ನುವ ಈ ದ್ವಂದ್ವ ಧೋರಣೆ ಇಂದಿನ ಜಾಗತಿಕ ರಾಜಕೀಯದ ಮೂಲಗುಣವಾಗಿದೆ. ಕದನ ವಿರಾಮ ಘೋಷಣೆಗಳ ನಡುವೆ ಕೂಡ ಸಿಡಿಯುವ ಬಾಂಬ್‌ಗಳು, ಎಗೆಯುವ ಕ್ಷಿಪಣಿಗಳು, ಉರಿಯುವ ನೆಲ , ಇವೆಲ್ಲವೂ ಈ ಶಾಂತಿಎಂಬ ಪದದ ಖಾಲಿತನವನ್ನು ಬಯಲಿಗೆಳೆಯುತ್ತವೆ. ಯುದ್ಧ ನಿಲ್ಲದೆ ಇರುವಾಗ ವಿರಾಮ ಘೋಷಿಸುವುದು ನಿಜಕ್ಕೂ ಶಾಂತಿಯೇ ಅಥವಾ ಕೊಲೆಗಳಿಗೆ ಕೊಡುವ ವಿಶ್ರಾಂತಿಯೇ ಎಂಬ ಪ್ರಶ್ನೆ ಗಂಭೀರವಾಗಿ ಎದುರಾಗುತ್ತದೆ.

ದುರಾಸೆ, ಅಹಂಕಾರ ಮತ್ತು ಸಂಧಾನ ನಾಟಕಗಳ ನಡುವೆ ಮಾನವೀಯತೆ ಕಣ್ಮರೆಯಾದ ಲೋಕಶಾಂತಿ ಮಾತಲ್ಲ, ನಡೆ ಆಗಬೇಕು. ದುರಾಸೆ ಅರಿತಾಗಲೇ ಜಾಗೃತಿ ಆರಂಭವಾಗುತ್ತದೆ. ಸ್ವಾವಲಂಬನೆಯೇ ಸುರಕ್ಷಿತ ಭವಿಷ್ಯ.ಇದನ್ನು ಅರಿಯಬೇಕು.

news_1783781977_7_330.jpg

 

ಜಾಗತಿಕ ರಾಜಕೀಯವು ಇಂದಿಗೆ ಮೌಲ್ಯಗಳ ಮೇಲೆ ನಿಂತ ವ್ಯವಸ್ಥೆಯಾಗಿಲ್ಲ; ಅದು ಲಾಭ ಮತ್ತು ಪ್ರಭುತ್ವದ ಮೇಲೆ ನಿಂತ ಆಟವಾಗಿದೆ. U SA ತನ್ನ ಪ್ರಭಾವವನ್ನು ಉಳಿಸಿಕೊಳ್ಳಲು ಜಗತ್ತಿನ ವಿವಿಧ ಭಾಗಗಳಲ್ಲಿ ಹಸ್ತಕ್ಷೇಪ ಮಾಡುತ್ತಾ ಬಂದಿದೆ. ಯುದ್ಧಗಳನ್ನು ಪ್ರಚೋದಿಸಿ, ನಂತರ ಅದನ್ನು ನಿಯಂತ್ರಿಸುವ ಹೆಸರಿನಲ್ಲಿ ತನ್ನ ಲಾಭವನ್ನು ಸಾಧಿಸುವುದು ಅದರ ತಂತ್ರವಾಗಿದೆ. ಇದು ಶಾಂತಿಯ ಮಾರ್ಗವಲ್ಲ, ಇದು ವ್ಯಾಪಾರದ ಮತ್ತೊಂದು ಮುಖವಾಗಿದೆ. ಜಗತ್ತಿನ ಸಂಪನ್ಮೂಲಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು, ಜಲಸಂಧಿಗಳ ಮೇಲಿನ ನಿಯಂತ್ರಣ ಪಡೆಯಲು, ರಾಜಕೀಯ ಒತ್ತಡಗಳನ್ನು ಹೇರುವ ಮೂಲಕ ಲಾಭ ಗಳಿಸುವ ಈ ಧೋರಣೆ ವಿಶ್ವದ ಸಮತೋಲನವನ್ನು ಹಾಳುಮಾಡುತ್ತಿದೆ. 

ಇನ್ನೊಂದೆಡೆ ಇರಾನ್ ತನ್ನ ಪ್ರಭಾವವನ್ನು ತೋರಿಸಲು ಅಹಂಕಾರದ ರಾಜಕೀಯವನ್ನು ಅನುಸರಿಸುತ್ತಿದೆ. ತನ್ನ ಮಿತ್ರ ಸಂಘಟನೆಗಳ ಮೂಲಕ ಪ್ರಭಾವ ವಿಸ್ತರಿಸುವ ಪ್ರಯತ್ನವು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಪ್ರತಿಕ್ರಿಯೆಯ ರಾಜಕೀಯ, ಪ್ರತೀಕಾರದ ಮನೋಭಾವ , ಇವುಗಳು ಶಾಂತಿಗೆ ಅಡ್ಡಿಯಾಗುತ್ತವೆ. ಒಂದು ಕಡೆ ದುರಾಸೆ, ಇನ್ನೊಂದು ಕಡೆ ಅಹಂಕಾರ ,ಈ ಎರಡು ಶಕ್ತಿಗಳು ಮುಖಾಮುಖಿಯಾಗಿದಾಗ, ಯುದ್ಧ ಅನಿವಾರ್ಯವಾಗುತ್ತದೆ. ಈ ಸಂಘರ್ಷದಲ್ಲಿ ಜಯ ಯಾರಿಗೂ ಸಿಗುವುದಿಲ್ಲ; ಸೋಲು ಮಾತ್ರ ಮಾನವೀಯತೆಯದೇ.

ಮಧ್ಯಪ್ರಾಚ್ಯ ಪ್ರದೇಶವು ಇಂದು ಯುದ್ಧದ ಕಣವಾಗಿಬಿಟ್ಟಿದೆ.  ಅಮೇರಿಕ ಮತ್ತು ಇರಾನ್‌ನ  ಶಕ್ತಿಗಳ ನಡುವೆ ನಡೆಯುತ್ತಿರುವ ದಾಳಿಗಳು ನಿರಂತರ ಹಿಂಸೆಯನ್ನು ಉಂಟುಮಾಡುತ್ತಿವೆ. ಕ್ಷಿಪಣಿಗಳ ಸುರಿಮಳೆ, ಕ್ಷಿಪಣಿ ದಾಳಿಗಳು, ನಾಶವಾದ ಮನೆಗಳು , ಇವೆಲ್ಲವೂ ಸಾಮಾನ್ಯ ಜನರ ಬದುಕನ್ನು ಚೂರುಮೂರು ಮಾಡುತ್ತಿವೆ. ಸುಮಾರು ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿರುವುದು, ಸಾವಿರಾರು ಜನರು ಗಾಯಗೊಳ್ಳುತ್ತಿರುವುದು ಈ ಯುದ್ಧದ ಭೀಕರತೆಯನ್ನು ತೋರಿಸುತ್ತದೆ. ಈ ಹಿನ್ನಲೆಯಲ್ಲಿ ಕದನ ವಿರಾಮಎಂಬ ಪದವು ವ್ಯಂಗ್ಯವಾಗಿ ಪರಿಣಮಿಸುತ್ತದೆ.

ಕದನ ವಿರಾಮ ಘೋಷಣೆಗಳು ನೆಲದ ಮೇಲೆ ಅನುಷ್ಠಾನಗೊಳ್ಳದಿದ್ದರೆ, ಅವು ಕೇವಲ ರಾಜಕೀಯ ನಾಟಕಗಳಾಗುತ್ತವೆ. ಯುದ್ಧವನ್ನು ನಿಲ್ಲಿಸದೆ, ಮಾತಿನಲ್ಲಿ ಮಾತ್ರ ಶಾಂತಿ ಹೇಳುವುದು ಜನರನ್ನು ಮೋಸಗೊಳಿಸುವ ವಿಧಾನವಾಗಿದೆ. ಇದು ನಿಜಕ್ಕೂ ವಧನ ಆರಾಮ  ಕೊಲೆಗಳಿಗೆ ಕೊಡುವ ವಿರಾಮ ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ಶಾಂತಿ ಮಾತುಗಳ ಮೇಲೆ ನಂಬಿಕೆ ಇಡುವುದು ಕಷ್ಟ. ಜಗತ್ತಿನ ಜನರು ನಿಜವಾದ ಶಾಂತಿಯನ್ನು ಬಯಸುತ್ತಾರೆ; ಆದರೆ ರಾಜಕೀಯವು ಅದನ್ನು ಸಾಧಿಸಲು ಸಿದ್ಧವಿಲ್ಲ.

ಇಂತಹ ಸಂದರ್ಭದಲ್ಲಿ  ಪಾಕಿಸ್ಥಾನ ಅನ್ನು ಮಧ್ಯಸ್ಥಿಕೆಯಾಗಿ ಮುಂದಿರಿ ಸುವುದು ಪ್ರಶ್ನಾರ್ಥಕವಾಗಿದೆ. ಅದರ ಉಗ್ರ ಸಂಘಟನೆಗಳ ಸಂಪರ್ಕದ ಬಗ್ಗೆ ಜಗತ್ತಿಗೆ ತಿಳಿದಿರುವ ಹಿನ್ನೆಲೆಯನ್ನು ಮರೆತು, ಅದನ್ನು ಸಂಧಾನದ ವೇದಿಕೆಯಾಗಿಸುವುದು ವಿಶ್ವಾಸಾರ್ಹತೆಯನ್ನು ಕುಂದಿಸುತ್ತದೆ. ಇದು ನಿಜವಾದ ಸಂಧಾನವಲ್ಲ, ಇದು ರಾಜಕೀಯ ತಂತ್ರದ ಭಾಗವಾಗಿರಬಹುದು. ಮಧ್ಯಸ್ಥಿಕೆಯ ಹೆಸರಿನಲ್ಲಿ ನಡೆಯುವ ಈ ನಾಟಕವು ಸಮಸ್ಯೆಯನ್ನು ಪರಿಹರಿಸುವುದಕ್ಕಿಂತ ಮತ್ತಷ್ಟು ಗೊಂದಲ ಸೃಷ್ಟಿಸುವ ಸಾಧ್ಯತೆ ಹೆಚ್ಚು.

ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಶೈಲಿಯಲ್ಲಿಯೂ ಈ ವಿರೋಧಾಭಾಸ ಸ್ಪಷ್ಟವಾಗುತ್ತದೆ. ಒಂದು ಕಡೆ ಕಠಿಣ ನಿಲುವು, ಮತ್ತೊಂದು ಕಡೆ ಸ್ನೇಹದ ಮಾತು , ಇದು ಸ್ಥಿರತೆಯ ಕೊರತೆಯನ್ನು ತೋರಿಸುತ್ತದೆ. ಭಾರತವನ್ನು ಹೊಗಳುವುದು, ಮತ್ತೆ ನಿರ್ಬಂಧ ಹೇರುವುದು, ನಂತರ ಮತ್ತೆ ಸ್ನೇಹದ ಮಾತುಗಳನ್ನಾಡುವುದು, ಇದು ಲಾಭದ ರಾಜಕೀಯದ ಭಾಗ. ನಂಬಿಕೆ ನಿರ್ಮಾಣವಾಗಬೇಕಾದ ಸ್ಥಳದಲ್ಲಿ ಅನುಮಾನ ಹೆಚ್ಚಾಗುತ್ತದೆ.

ಈ ದುರಾಸೆ ಮತ್ತು ಅಹಂಕಾರದ ರಾಜಕೀಯದಿಂದ ಉಂಟಾಗುವ ಪರಿಣಾಮಗಳು ಜಗತ್ತಿನ ಮೇಲೆ ಭಾರವಾಗುತ್ತಿವೆ. ಆರ್ಥಿಕ ಅಸ್ಥಿರತೆ, ಇಂಧನದ ಬೆಲೆ ಏರಿಕೆ, ನಿರಾಶ್ರಿತರ ಸಮಸ್ಯೆ ,ಇವೆಲ್ಲವೂ ಸಾಮಾನ್ಯ ಜನರ ಬದುಕನ್ನು ಕಷ್ಟಕರಗೊಳಿಸುತ್ತವೆ. ಯುದ್ಧದ ಪರಿಣಾಮವು ಕೇವಲ ಯುದ್ಧಭೂಮಿಯಲ್ಲ, ಅದು ಜಗತ್ತಿನ ಪ್ರತಿಯೊಂದು ದೇಶದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜಾಗತಿಕ ಸಮತೋಲನ ಕದಡುತ್ತದೆ.

ಇಂತಹ ಗೊಂದಲದ ನಡುವೆ ಭಾರತ ಯಂತಹ ರಾಷ್ಟ್ರಗಳು ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗಿದೆ. ಸ್ವಾವಲಂಬನೆ ಅತ್ಯಂತ ಮುಖ್ಯ. ನಮ್ಮ ಸಂಪನ್ಮೂಲ ಗಳನ್ನು ನಾವು ಅಭಿವೃದ್ಧಿಪಡಿಸಿಕೊಳ್ಳಬೇಕು. ಬೇರೆ ದೇಶಗಳ ಮೇಲೆ ಅವಲಂಬಿತವಾಗಿರುವುದು ಭವಿಷ್ಯದಲ್ಲಿ ಅಪಾಯಕಾರಿಯಾಗಬಹುದು. ಸ್ಥಳೀಯ ಉತ್ಪಾದನೆ, ಮಿತ ವ್ಯಯ, ಜಾಗೃತ ಬಳಕೆ , ಇವುಗಳು ದೇಶದ ಭದ್ರತೆಗೆ ಅಗತ್ಯ.

 ಜಾಗತಿಕ ರಾಜಕೀಯದ ಈ ಕಪಟ ಮುಖವಾಡವನ್ನು ಅರಿಯುವುದು ಅತ್ಯಗತ್ಯ. ಕದನ ವಿರಾಮವೇ? ವಧನ ಆರಾಮವೇ?” ಎಂಬ ಪ್ರಶ್ನೆಗೆ ಉತ್ತರ ಸಿಗುವವರೆಗೂ ಶಾಂತಿ ಸಂಪೂರ್ಣವಾಗುವುದಿಲ್ಲ.  ಭಾರತ ಯಂತಹ ದೇಶಗಳು ಮೌಲ್ಯಾಧಾರಿತ ನಿಲುವು, ಜಾಗೃತಿ ಮತ್ತು ಸ್ವಾವಲಂಬನೆಯ ಮೂಲಕವೇ ಭವಿಷ್ಯವನ್ನು ಸುರಕ್ಷಿತಗೊಳಿಸಬೇಕು. ದುರಾಸೆ ಮತ್ತು ಅಹಂಕಾರ ಒಂದಾದಾಗ ಯುದ್ಧ ನಿಲ್ಲದು; ಆದರೆ ಜಾಗೃತಿ ಮತ್ತು ನ್ಯಾಯ ಒಂದಾದಾಗ ಶಾಂತಿ ಸಾಧ್ಯ. 

ಕದನ ವಿರಾಮದ ಮಾತಿಗಿಂತ, ಯುದ್ಧ ನಿಲ್ಲಿಸುವ ಕ್ರಿಯೆಯೇ ನಿಜವಾದ ಶಾಂತಿ.ಸ್ವಾವಲಂಬನೆಯೇ ದೇಶದ ಬಲ, ದುರಾಸೆಯೇ ಜಗತ್ತಿನ ದುರ್ಬಲತೆ.

ಮೀಸೆ ಮಣ್ಣಾದರೂ ಗುಣ ಬದಲಾಗದುಎಂಬ ಗಾದೆಯಂತೆ, ಅವಗುಣಗಳಲ್ಲಿ ಮುಳುಗಿ ಅಹಂಕಾರದಿಂದ ಬದುಕುವವರು, ಸೋಲನ್ನು ಸಹಿಸದೆ ಸದಾ ಗೆಲುವು ನಮ್ಮದೇ ಎಂದು ದರ್ಪ ಹೊತ್ತು ನಡೆಯುವರು. ಮಿತಿಯೊಳಗಿನ ಆಸೆ ಗುರಿಯಾಗುತ್ತದೆ,‌ ಅತಿಯಾದ ದುರಾಸೆ ವಿನಾಶದ ತಿಥಿಯಾಗುತ್ತದೆ, ಇದನ್ನು ಅರಿಯುವ ವಿವೇಕವೇ ನಿಜವಾದ ಜ್ಞಾನ.
ಲೇಖನ: ಕಾಶಿಗೌ, ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲರು, ಮೈಸೂರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.