ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇಲ್ಲಿನ ಪ್ರತಿಷ್ಠಿತ ಸಿಟಿ ಇನ್‌ಸ್ಟಿಟ್ಯೂಟ್‌ನ ಕಾರ್ಯದರ್ಶಿ ಎನ್.ಎಲ್. ವೆಂಕಟೇಶರೆಡ್ಡಿ ಅವರ ಏಕಪಕ್ಷೀಯ ಆಡಳಿತ ಹಾಗೂ ದುರಾಡಳಿತಕ್ಕೆ ಬೇಸತ್ತು ಸಂಸ್ಥೆಯ ನಿರ್ದೇಶಕರಾದ ಹೆಚ್.ಎನ್. ಲೋಕೇಶ್ ಅವರು ತಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ದಿನಾಂಕ 15-09-2026 ರಂದು ಸಂಸ್ಥೆಯ ಕಾರ್ಯದರ್ಶಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ, ಸಂಸ್ಥೆಯಲ್ಲಿ ನಡೆಯುತ್ತಿರುವ ಹಲವು ಅಕ್ರಮ ಹಾಗೂ ಆಡಳಿತಾತ್ಮಕ ಲೋಪಗಳನ್ನು ವಿವರವಾಗಿ ಉಲ್ಲೇಖಿಸಿದ್ದಾರೆ.
ರಾಜೀನಾಮೆ ಪತ್ರದಲ್ಲೇನಿದೆ?: ದುರಾಡಳಿತ ಮತ್ತು ಗೌರವದ ಕೊರತೆ: ಸಂಸ್ಥೆಯ ಕಾರ್ಯದರ್ಶಿ ಎನ್.ಎಲ್. ವೆಂಕಟೇಶರೆಡ್ಡಿ, ಉಪಾಧ್ಯಕ್ಷ ಎನ್. ಜಯಣ್ಣ ಹಾಗೂ ನಿರ್ದೇಶಕ ಸಿ. ಚಂದ್ರಪ್ಪ ಅವರುಗಳು ಆಡಳಿತ ಮಂಡಳಿಯ ಇತರೆ ನಿರ್ದೇಶಕರಿಗೆ ಯಾವುದೇ ಗೌರವ ನೀಡದೆ, ಪೂರ್ವಭಾವಿ ನೋಟಿಸ್ ನೀಡದೆ ಏಕಪಕ್ಷೀಯವಾಗಿ ಸಭೆ ಹಾಗೂ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಹಣಕಾಸಿನ ಲೆಕ್ಕಪತ್ರದಲ್ಲಿ ಅಕ್ರಮ: ಇನ್‌ಸ್ಟಿಟ್ಯೂಟ್‌ನಲ್ಲಿ ದಿನನಿತ್ಯ ನಡೆಯುವ ಕ್ರೀಡೆಗಳು, ಮನೋರಂಜನೆ, ಬಿಲಿಯರ್ಡ್ಸ್, ಟೆನ್ನಿಸ್ ಹಾಗೂ ಕಾರ್ಡ್ಸ್ ಆಟಗಳಿಂದ ಬರುವ ಆದಾಯಕ್ಕೆ ಸರಿಯಾದ ರಸೀದಿ ನೀಡದೆ, ಕೇವಲ ಅನಾಮಧೇಯ ಚೀಟಿಗಳಲ್ಲಿ ಲೆಕ್ಕ ಇಡಲಾಗುತ್ತಿದೆ. ಈ ಬಗ್ಗೆ ಅಧಿಕೃತ ಖಾತೆಗೆ ಹಣ ಜಮಾ ಮಾಡಲು ಮತ್ತು ಸೂಕ್ತ ಲೆಕ್ಕಪತ್ರ ನೀಡಲು ಕೇಳಿದರೆ, ಯಾವುದೇ ಮಾಹಿತಿ ನೀಡುತ್ತಿಲ್ಲ.
ನೋಟಿಸ್ ಹಾಗೂ ವಜಾ ಬೆದರಿಕೆ: ಆಡಳಿತ ಲೋಪಗಳನ್ನು ತಿದ್ದಿಕೊಳ್ಳಲು ಸಲಹೆ ನೀಡಿದರೆ, ನಿರ್ದೇಶಕರಿಗೆ ನೋಟಿಸ್ ನೀಡುವುದು ಹಾಗೂ ಹುದ್ದೆಯಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ.
ಸಂಸ್ಥೆಯ ಹಣ ದುರ್ಬಳಕೆ: ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕೋರ್ಟ್ ಹಾಗೂ ಕಚೇರಿಗಳ ಅಲೆದಾಟದ ನೆಪದಲ್ಲಿ ಸಂಸ್ಥೆಯ 5 ರಿಂದ 6 ಲಕ್ಷ ರೂಪಾಯಿಗಳನ್ನು ಅನಗತ್ಯವಾಗಿ ಖರ್ಚು ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ: ಖಜಾಂಚಿ ವಿ.ಎನ್. ಅಜಿತ್ ಪ್ರಸಾದ್ ಜೈನ್ ಅವರ ಮೇಲಿದ್ದ ಆರೋಪಗಳು ಸಾಬೀತಾಗದ ಕಾರಣ, ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸುವಂತೆ ಜಿಲ್ಲಾಧಿಕಾರಿಗಳು (ಆದೇಶ ಸಂಖ್ಯೆ: ಸಿ.ಆರ್.691/2025-26) ಆದೇಶ ಹೊರಡಿಸಿದ್ದರೂ, ಅದನ್ನು ಪರಿಪಾಲಿಸದೆ ನಿಯಮಬಾಹಿರವಾಗಿ ನಡೆದುಕೊಳ್ಳಲಾಗುತ್ತಿದೆ.
ಈ ಎಲ್ಲಾ ಕಾನೂನುಬಾಹಿರ ಹಾಗೂ ದುರಾಡಳಿತದ ನಡವಳಿಕೆಗಳಿಂದ ಸಂಸ್ಥೆಯ ಗೌರವಕ್ಕೆ ಧಕ್ಕೆಯಾಗುತ್ತಿದ್ದು, ಸಂಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಈ ಅಕ್ರಮಗಳಿಗೆ ಬೇಸತ್ತು ತಮ್ಮ ರಾಜೀನಾಮೆಯನ್ನು ಸಲ್ಲಿಸುತ್ತಿರುವುದಾಗಿ ಹೆಚ್.ಎನ್. ಲೋಕೇಶ್ ತಿಳಿಸಿದ್ದಾರೆ. ಅಲ್ಲದೆ, ತಕ್ಷಣವೇ ತಮ್ಮ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಮನವಿ ಮಾಡಿದ್ದಾರೆ.
ಇದೇ ವಿಚಾರಕ್ಕೆ ಅವರು ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದ್ದಾರೆ.




