ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಡತನದ ಅಡೆತಡೆಗಳನ್ನು ಲೆಕ್ಕಿಸದೆ, ಸ್ವಂತ ಪರಿಶ್ರಮ ಮತ್ತು ಛಲದಿಂದ ರಾಷ್ಟ್ರಮಟ್ಟದಲ್ಲಿ ಸಾಧನೆ ತೋರುತ್ತಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಿಪುರ ಗ್ರಾಮದ ಯುವ ಬಿಲ್ಲುಗಾರ್ತಿ ದೇವಮ್ಮ ಮಾನಪ್ಪ ಅವರ ಕ್ರೀಡಾ ಪಯಣಕ್ಕೆ ಸಚಿವ ಎಂ.ಬಿ. ಪಾಟೀಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿನ್ನ ಹಾಗೂ ಬೆಳ್ಳಿ ಪದಕಗಳೊಂದಿಗೆ ತಮ್ಮನ್ನು ಭೇಟಿಯಾದ ದೇವಮ್ಮ ಅವರ ಸಾಧನೆಯನ್ನು ಸಚಿವರು ಕೊಂಡಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಸಚಿವರು, ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ಮತ್ತು ಬೆಂಬಲ ಸಿಕ್ಕರೆ ಜಾಗತಿಕ ಮಟ್ಟದಲ್ಲೂ ಸಾಧನೆ ಮಾಡಬಹುದು ಎಂಬುದಕ್ಕೆ ದೇವಮ್ಮ ಉತ್ತಮ ನಿದರ್ಶನ ಎಂದು ತಿಳಿಸಿದ್ದಾರೆ.
ಆರ್ಥಿಕ ನೆರವು ಮತ್ತು ಕ್ರೀಡಾ ಕಿಟ್: ಬಡ ಕುಟುಂಬದ ಹಿನ್ನೆಲೆಯುಳ್ಳ ದೇವಮ್ಮ ಅವರಿಗೆ ಕಳೆದ ವರ್ಷ ಸಿಎಸ್ಆರ್ ನಿಧಿಯಡಿ ಅಂದಾಜು ₹3.5 ಲಕ್ಷ ಮೌಲ್ಯದ ಅತ್ಯಾಧುನಿಕ ಬಿಲ್ಲುಗಾರಿಕೆ (ಆರ್ಚರಿ) ಕ್ರೀಡಾ ಕಿಟ್ ಒದಗಿಸಲಾಗಿತ್ತು.
ಪದಕಗಳ ಬೇಟೆ: ಸಚಿವರ ಬೆಂಬಲದೊಂದಿಗೆ ತಾಲೂಕು ಹಾಗೂ ರಾಜ್ಯಮಟ್ಟದಲ್ಲಿ ಕಣಕ್ಕಿಳಿದ ದೇವಮ್ಮ, 2025ರ ದಸರಾ ಕ್ರೀಡಾಕೂಟದ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದು ಬೀಗಿದ್ದಾರೆ.
ಒಲಿಂಪಿಕ್ಸ್ ತರಬೇತಿಗೆ ಭರವಸೆ: ತಂದೆಯನ್ನು ಕಳೆದುಕೊಂಡಿರುವ ದೇವಮ್ಮ ಅವರ ಕನಸಿಗೆ ನೆರವಾಗುವ ನಿಟ್ಟಿನಲ್ಲಿ, ಮುಂದಿನ ದಿನಗಳಲ್ಲಿ ಒಲಿಂಪಿಕ್ ಮಟ್ಟದ ಉನ್ನತ ತರಬೇತಿ ಹಾಗೂ ಅಗತ್ಯವಿರುವ ಎಲ್ಲಾ ಕ್ರೀಡಾ ಪರಿಕರಗಳಿಗಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಶುಭ ಹಾರೈಕೆ: ದೇವಮ್ಮ ಅವರು ಕೇವಲ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಸೀಮಿತವಾಗದೆ, ಭವಿಷ್ಯದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ಪದಕ ಗೆದ್ದು ದೇಶದ ಕೀರ್ತಿಯನ್ನು ಪತಾಕೆ ಹಾರಿಸಲಿ ಎಂದು ಸಚಿವ ಎಂ.ಬಿ. ಪಾಟೀಲ್ ಹಾರೈಸಿದ್ದಾರೆ.



