ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ. ಸಂಭವಿಸಿ ಖಾಸಗಿ ಬ್ಯಾಂಕ್ ಉದ್ಯೋಗಿಗಳಿಬ್ಬರು ಸಾವನ್ನಪ್ಪಿರುವ ಘಟನೆ ನಗರದ ಕೋರ್ಟ್ ರಸ್ತೆಯಲ್ಲಿ ಶನಿವಾರ ರಾತ್ರಿ 11 ಗಂಟೆಗೆ ಸಂಭವಿಸಿದೆ.
ಮೃತರನ್ನು ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ನಿವಾಸಿ ನಾಗೇಶ್ (26 ವರ್ಷ) ಮತ್ತು ಪಾಂಡವಪುರ ತಾಲೂಕಿನ ಹರಳು ಕುಪ್ಪೆ ಗ್ರಾಮದ ಮನೋಜ್ (24 ವರ್ಷ) ಎಂದು ಗುರುತಿಸಲಾಗಿದೆ. ಮೃತರು ಡಿ.ಕ್ರಾಸ್ ಬಳಿಯ ಖಾಸಗಿ ಬ್ಯಾಂಕ್ ಉದ್ಯೋಗಿಗಳು ಎನ್ನಲಾಗಿದೆ.
ದೊಡ್ಡಬಳ್ಳಾಪುರ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಸವಾರರು ಎದುರು ಬದಿಯಿಂದ ಬಂದ ಟ್ರ್ಯಾಕ್ಟರ್ ಗೆ ಮುಖಾಮುಖಿ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
ಘಟನೆಯಲ್ಲಿ ಮನೋಜ್ ಸ್ಥಳದಲ್ಲಿಯೇ ಸಾವನಪ್ಪಿದ್ದು, ನಾಗೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಇರುವುದು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು, ಸಾವನ್ನಪ್ಪಲು ಪ್ರಮುಖ ಕಾರಣ ಎನ್ನಲಾಗುತ್ತಿದ್ದು, ನಗರದಲ್ಲಿ ರಸ್ತೆಯ ಮದ್ಯದಲ್ಲಿ ದಿಬ್ಬಗಳಿಗೆ ಸೂಚನಾ ಪಟ್ಟಿ ಹಾಗು ಬೀದಿ ದೀಪಗಳ ಅಳವಡಿಕೆ ಇಲ್ಲದೆ ಇರುವುದು ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ನಗರಸಭೆ ಅಧಿಕಾರಿಗಳ ವಿರುದ್ದ ನಿರ್ಲಕ್ಷ್ಯ ಧೋರಣೆಗೆ ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.


