ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾರತ ಸೇವಾದಳ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ವತಿಯಿಂದ ಭಾರತ ಸೇವಾದಳ ಸಂಸ್ಥಾಪಕ , ಸ್ವಾತಂತ್ರ್ಯ ಹೋರಾಟಗಾರ ಡಾ.ನಾ.ಸು. ಹರ್ಡೀಕರ್ ರವರ 137ನೇ ಜನ್ಮದಿನಾಚರಣೆಯನ್ನು ನಗರದ ಬಸವೇಶ್ವರ ವೃತ್ತದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ಜಿಲ್ಲಾ ಸೇವಾದಳದ ಜಿಲ್ಲಾಧ್ಯಕ್ಷ ಜಿ. ಲಕ್ಷ್ಮೀಪತಿ ಮಾತನಾಡಿ ನಾ.ಸು.ಹರ್ಡಿಕರ್ ರವರು ತಮ್ಮ ಉನ್ನತ ವ್ಯಾಸಂಗವನ್ನು ವಿದೇಶದಲ್ಲಿ ಮಾಡಿ ನಂತರ ಭಾರತಕ್ಕೆ ಮರಳಿ ಭಾರತದ ಸ್ವಾತಂತ್ರ್ಯದ ಚಳವಳಿಯಲ್ಲಿ ಭಾಗವಹಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಯುವಕರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಭಾರತ ಸೇವಾದಳ ಸ್ಥಾಪಿಸುವ ಮೂಲಕ ಶಿಸ್ತು ರಾಷ್ಟ್ರ ಪ್ರೇಮ ಮತ್ತು ಸೇವಾ ಮನೋಭಾವವನ್ನ ಬೆಳೆಸಿದರು. ಹಿಂದೂಸ್ತಾನಿ ಸೇವಾದಳವನ್ನು ಸ್ಥಾಪಿಸುವ ಮೂಲಕ ಲಕ್ಷಾಂತರ ಯುವಕರಲ್ಲಿ ಶಿಸ್ತು ರಾಷ್ಟ್ರ ಪ್ರೇಮ ಮತ್ತು ಸೇವಾ ಮನೋಭಾವವನ್ನು ಬೆಳೆಸಿದರು. ಸ್ವಾತಂತ್ರ್ಯದ ನಂತರ ಹಿಂದುಸ್ತಾನಿ ಸೇವಾದಳವನ್ನು ಭಾರತ ಸೇವಾದಳ ಎಂದು ಹೆಸರಿಸಿ ಅದನ್ನ ಶಿಕ್ಷಣ ಇಲಾಖೆಯೊಂದಿಗೆ ಸಂಯೋಜಿಸಿ ಇಂದಿನ ಮಕ್ಕಳಲ್ಲಿ ರಾಷ್ಟ್ರ ಪ್ರೇಮ ಶಿಸ್ತು ಹಾಗೂ ಸೇವಾ ಮನೋಭಾವವನ್ನು ಪ್ರೇರೇ ಪಿಸುವುದರಲ್ಲಿ ಭಾರತ ಸೇವಾದಳ ಉತ್ತಮವಾದ ಕೆಲಸವನ್ನು ನಿರ್ವಹಿಸುತ್ತಿದೆ.
ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಾದ ರಾಷ್ಟ್ರಪ್ರೇಮ,ಶಿಸ್ತು,ಸೇವಾ ಮನೋಭಾವವನ್ನು ಬೆಳೆಸುವಲ್ಲಿ ಬೆಂಗಳೂರು ಗ್ರಾಮಾಂತರ ಸೇವಾದಳದ ಜಿಲ್ಲಾ ಮತ್ತು ತಾಲೂಕು ಘಟಕಗಳು ಪ್ರತಿಯೊಂದು ಶಾಲೆಯಲ್ಲೂ ಸೇವಾದಳದ ಶಾಖೆಗಳನ್ನು ತೆರೆದು, ಸೇವಾದಳದ ಪ್ರಾಮುಖ್ಯತೆಯನ್ನು ತಿಳಿಸಲಾಗುತ್ತಿದೆ ಎಂದರು.
ಸೇವಾದಳದ ತಾಲೂಕು ಸಂಘಟಕ ಸುರೇಶ್ ಮಾತನಾಡಿ ಡಾ. ನಾ.ಸು. ಹರ್ಡೀಕರ್ ಅವರ ಜೀವನ ಚರಿತ್ರೆ ಅವರ ಸಂಘಟನೆಗಳ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯಾಧ್ಯಕ್ಷ ಹಮಾಮ್ ವೆಂಕಟೇಶ್. ಪ್ರಧಾನ ಕಾರ್ಯದರ್ಶಿ ವಿ. ಸಿ.ಜ್ಯೋತಿ ಕುಮಾರ್. ನಗರಸಭೆಯ ನಾಮ ನಿರ್ದೇಶಕ ಸದಸ್ಯ ಕಾಂತರಾಜ್. ಜಿಲ್ಲಾ ಸಂಘಟಕ ರಾಜು, ವಕೀಲರಾದ ಆರ್.ವಿ.ಶಿವಕುಮಾರ್, ಆರ್.ವಿ.ಮನು. ನಿರ್ದೇಶಕ ಮಹೇಶ್ ಮುಂತಾದವರು ಇದ್ದರು.


