ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದು ರಾಜ್ಯಕ್ಕೆ ಹಿರಿಮೆ ತಂದಿರುವ ಎಂಟು ಕನ್ನಡಿಗ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದು, ಕ್ರೀಡಾಪಟುಗಳಿಗೆ ಭರ್ಜರಿ ನಗದು ಬಹುಮಾನ ಹಾಗೂ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಘೋಷಿಸಿದ್ದಾರೆ.
ರಾಜ್ಯದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ಮತ್ತು ಯುವಜನರನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸಿ 'ಹೊಸ ಕರ್ನಾಟಕ' ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ನಗದು ಬಹುಮಾನ ಹಾಗೂ ಪ್ರೋತ್ಸಾಹಧನ ವಿವರ: ಚಿನ್ನದ ಪದಕ ವಿಜೇತರು: 1 ಕೋಟಿ ನಗದು ಬಹುಮಾನ. ಬೆಳ್ಳಿ ಪದಕ ವಿಜೇತರು: 75 ಲಕ್ಷ ನಗದು ಬಹುಮಾನ. ಕಂಚಿನ ಪದಕ ವಿಜೇತರು: 50 ಲಕ್ಷ ನಗದು ಬಹುಮಾನ.
ಭಾಗವಹಿಸಿದ ಕ್ರೀಡಾಪಟುಗಳು: ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಿದ 20 ಕನ್ನಡಿಗ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ಪ್ರೋತ್ಸಾಹಧನ ನೀಡಲಾಗಿದೆ.
ಒಲಿಂಪಿಕ್ಸ್ ಸಿದ್ಧತೆ: ಮುಂಬರುವ ಒಲಿಂಪಿಕ್ಸ್ ಪಂದ್ಯಾವಳಿಗೆ ಸಿದ್ಧತೆ ನಡೆಸುತ್ತಿರುವ ಕ್ರೀಡಾಪಟುಗಳಿಗೆ ತಲಾ 10 ಲಕ್ಷ ಪ್ರೋತ್ಸಾಹಧನ ಕಲ್ಪಿಸಲಾಗಿದೆ.
ಕ್ರೀಡಾಪಟುಗಳಿಗೆ ಉದ್ಯೋಗ ಮೀಸಲಾತಿ ಹಾಗೂ 'ಗುರಿ ಒಲಿಂಪಿಕ್ಸ್': ಕ್ರೀಡಾಪಟುಗಳ ಭವಿಷ್ಯಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರಿಯಲ್ಲಿ ಶೇಕಡಾ 2ರಷ್ಟು ಹಾಗೂ ಅರಣ್ಯ ಮತ್ತು ಪೊಲೀಸ್ ಇಲಾಖೆಗಳಲ್ಲಿ ಶೇಕಡಾ 3ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಇದರೊಂದಿಗೆ ಜಾಗತಿಕ ಮಟ್ಟದಲ್ಲಿ ಪದಕ ಬೇಟೆಗೆ ಅನುಕೂಲವಾಗುವಂತೆ 'ಗುರಿ ಒಲಿಂಪಿಕ್ಸ್' ಎಂಬ ವಿಶೇಷ ಯೋಜನೆಯನ್ನು ರೂಪಿಸಲಾಗಿದೆ.
ವಿದ್ಯಾರ್ಥಿಗಳು ಕೇವಲ ಓದಿನಲ್ಲಿ ಮಾತ್ರವಲ್ಲದೆ ಕ್ರೀಡೆ, ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲೂ ಸಾಧನೆ ಮಾಡುವ ಮೂಲಕ ರಾಜ್ಯದ ಕೀರ್ತಿ ಹೆಚ್ಚಿಸಬೇಕು, ಅವರ ಬೆಂಬಲಕ್ಕೆ ಸರ್ಕಾರ ಸದಾ ಇರಲಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.




