ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸದೃಢವಾಗಿದ್ದ ಕಾಂಕ್ರೀಟ್ ರಸ್ತೆ ಮೇಲೆ ಜಲ್ಲಿ ರಸ್ತೆ ನಿರ್ಮಾಣ ಮಾಡಿದ ಅಪರೂಪದ ಅಸಾಮಾನ್ಯ ಕಾಮಗಾರಿಯೊಂದು ದೊಡ್ಡಬಳ್ಳಾಪುರದ ಕಂಟನಕುಂಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಮೇಡಿಹಳ್ಳಿ ಗ್ರಾಮದ ದಲಿತರ ಕಾಲೋನಿ ರಸ್ತೆಗೆ 6 ವರ್ಷಗಳ ಹಿಂದೆ ಕಾಂಕ್ರೀಟ್ ರಸ್ತೆಯನ್ನ ನಿರ್ಮಾಣ ಮಾಡಲಾಗಿದ್ದು, ಚೆನ್ನಾಗಿದ್ದ ರಸ್ತೆ ಮೇಲೆ ಜಲ್ಲಿ ರಸ್ತೆಯನ್ನು ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುವುದರ ಜೊತೆಗೆ ಕಾಮಗಾರಿ ನೆಪದಲ್ಲಿ ಹಣ ಹೊಡೆಯಲಾಗಿದೆ ಎಂದು ಮೇಡಿಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಕಂಟನಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೇಡಿಹಳ್ಳಿ ಗ್ರಾಮದಲ್ಲಿ ಬಹುತೇಕ ದಲಿತರು ವಾಸವಾಗಿದ್ದಾರೆ. ದಲಿತರನ್ನ ದಲಿತರ ಜನಪ್ರತಿನಿಧಿಯೇ ದಬ್ಬಾಳಿಕೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥರಾದ ಸುರೇಶ್ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿ ಮಾಜಿ ಅಧ್ಯಕ್ಷರು ತಮ್ಮ ಅಧಿಕಾರದ ದುರ್ಬಳಕೆಯನ್ನ ಮಾಡಿಕೊಂಡಿದ್ದಾರೆ. 6 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ಕಾಂಕ್ರೀಟ್ ರಸ್ತೆ ಉತ್ತಮ ಸ್ಥಿತಿಯಲ್ಲಿದ್ದರೂ ಹಣ ಹೊಡೆಯುವ ಕಾರಣಕ್ಕೆ ಅದರ ಮೇಲೆ ಜಲ್ಲಿ ಹಾಸಿ 5 ಲಕ್ಷ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ರಸ್ತೆಯಲ್ಲಿ ಮಾಜಿ ಜನಪ್ರತಿನಿಧಿಗೆ ಸೇರಿದ ಇಟ್ಟಿಗೆ ಫ್ಯಾಕ್ಟರಿ ಇದ್ದು, ಫ್ಯಾಕ್ಟರಿಗೆ ವಾಹನ ಹೋಗಲು ಬರಲು ತಮ್ಮ ಸ್ವಾರ್ಥ ಉದ್ದೇಶಕ್ಕಾಗಿ ಕಾಂಕ್ರೀಟ್ ರಸ್ತೆ ಮೇಲೆ ಜಲ್ಲಿ ರಸ್ತೆಯನ್ನ ನಿರ್ಮಾಣ ಮಾಡಿ ಅಧಿಕಾರದ ದುರ್ಬಳಕೆ ಮಾಡಿಕೊಂಡಿದ್ದಾರೆ. ಇವರ ದೌರ್ಜನ್ಯ ಇಲ್ಲಿಗೆ ನಿಲ್ಲುವುದಿಲ್ಲ. ಇಟ್ಟಿಗೆ ತಯಾರಿಸಲು ಬೇಕಾದ ಮಣ್ಣನ್ನು ದಲಿತರ ಸ್ಮಶಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಅಕ್ರಮವಾಗಿ ಮಣ್ಣು ತೆಗೆದಿದ್ದಾರೆ. ತಮ್ಮ ಅಧಿಕಾರ ಬಳಸಿಕೊಂಡು ಬಡವರ ನಿವೇಶನಗಳನ್ನ ತನ್ನ ಕುಟುಂಬಸ್ಥರ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಆತನ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಆರೋಪಿಸಿದರು.



