ಚಂದ್ರವಳ್ಳಿ ನ್ಯೂಸ್, ನವದೆಹಲಿ:
ದೆಹಲಿಯ ನಾರ್ತ್ ಬ್ಲಾಕ್ನ ಹಿಂಭಾಗದಲ್ಲಿರುವ ಕಟ್ಟಡವೊಂದರಲ್ಲಿ ಸೋಮವಾರ ಬೆಳಿಗ್ಗೆ ದಿಢೀರ್ ಬೆಂಕಿ ಕಾಣಿಸಿಕೊಂಡು ದಟ್ಟವಾದ ಹೊಗೆ ಆವರಿಸಿದ ಘಟನೆ ನಡೆದಿದೆ. ಕಟ್ಟಡದಿಂದ ದಟ್ಟ ಹೊಗೆ ಬರುತ್ತಿರುವುದನ್ನು ಗಮನಿಸಿದ ತಕ್ಷಣ ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
ಕಟ್ಟಡದಿಂದ ಹೊಗೆ ಬರುತ್ತಿರುವ ಕುರಿತು ಬೆಳಿಗ್ಗೆ 11.10 ಕ್ಕೆ ಕರೆ ಬಂದಿತ್ತು ಎಂದು ದೆಹಲಿ ಅಗ್ನಿಶಾಮಕ ಸೇವೆ ಅಧಿಕೃತವಾಗಿ ತಿಳಿಸಿದೆ. ಪ್ರಸ್ತುತ ಕಟ್ಟಡದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಒಳಭಾಗದಲ್ಲಿದ್ದ ಕೆಲವು ಹಳೆಯ ವಸ್ತುಗಳನ್ನು ತೆರವುಗೊಳಿಸುವ ಕೆಲಸಗಳು ನಡೆಯುತ್ತಿದ್ದವು. ಇದೇ ಬೆಂಕಿ ಅವಘಡಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಸಂಸತ್ತಿನತ್ತ ತೆರಳುತ್ತಿದ್ದ ಶಿವಸೇನಾ ಸಂಸದ ಮಿಲಿಂದ್ ದಿಯೋರಾ ಅವರು ನಾರ್ತ್ ಬ್ಲಾಕ್ನ ಹಿಂಭಾಗದಿಂದ ದಟ್ಟ ಹೊಗೆ ಏಳುತ್ತಿರುವುದನ್ನು ಮೊದಲು ಗಮನಿಸಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ದಟ್ಟ ಕಪ್ಪು ಹೊಗೆ ಆವರಿಸಿರುವ ಚಿತ್ರವನ್ನು ಹಂಚಿಕೊಂಡಿರುವ ದಿಯೋರಾ, ಕಟ್ಟಡದಲ್ಲಿದ್ದವರೆಲ್ಲರೂ ಸುರಕ್ಷಿತವಾಗಿರಲಿ ಎಂದು ಹಾರೈಸಿದ್ದು, ತುರ್ತು ಸೇವೆಗಳು ತ್ವರಿತವಾಗಿ ಸ್ಪಂದಿಸಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.



