ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರವರ ವಿರುದ್ಧ ಕೆಲವು ಸನಾತನವಾದಿಗಳು ವ್ಯಕ್ತಪಡಿಸುತ್ತಿರುವ ವಿರೋಧ ಮತ್ತು ಟೀಕೆಗಳು ವಿಷಾದನೀಯವಾಗಿವೆ ಎಂದು ಇತಿಹಾಸ ಉಪನ್ಯಾಸಕ ಡಾ. ಜಿ.ವಿ. ಮಂಜುನಾಥ ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮ ವಿಚಾರಧಾರೆ, ಧಾರ್ಮಿಕ ನಂಬಿಕೆ ಮತ್ತು ತಾತ್ವಿಕ ನಿಲುವುಗಳನ್ನು ಅಭಿವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ ಭಿನ್ನ ವಿಚಾರಧಾರೆಯನ್ನು ಹೊಂದಿರುವವರನ್ನು ಗುರಿಯಾಗಿಸಿಕೊಂಡು ವಿರೋಧಿಸುವುದು, ಅವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದುದು.
ಬಸವಣ್ಣನವರ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯತೆಯ ಉದಾತ್ತ ತತ್ವಗಳನ್ನು ಸಮಾಜದಲ್ಲಿ ಪ್ರಸಾರ ಮಾಡುತ್ತಾ, ಶರಣ ಸಂಸ್ಕೃತಿಯ ಜಾಗೃತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಶ್ರೀ ಗುರುಬಸವ ಪಟ್ಟದ್ದೇವರವರ ತಾತ್ವಿಕ ನಿಲುವು ಮತ್ತು ಸಮಾಜಮುಖಿ ಕಾರ್ಯಗಳನ್ನು ಗೌರವಿಸಬೇಕಾಗಿದೆ.

ಇಂತಹ ಟೀಕೆ ಮತ್ತು ವಿರೋಧಗಳಿಗೆ ಶ್ರೀಗಳು ಎದೆಗುಂದದೆ, ಅಂಜದೆ, ಅಳುಕದೆ ತಮ್ಮ ಬಸವತತ್ವದ ನಿಷ್ಠೆ ಹಾಗೂ ಸಮಾಜಸೇವೆಯ ಕಾರ್ಯಗಳನ್ನು ಇನ್ನಷ್ಟು ದೃಢವಾಗಿ ಮುಂದುವರಿಸಲಿ. ಬಸವೇಶ್ವರರು ಅವರಿಗೆ ಮತ್ತಷ್ಟು ಆತ್ಮಸ್ಥೈರ್ಯ, ಧೈರ್ಯ, ಸಂಕಲ್ಪಶಕ್ತಿ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸಲಿ ಎಂದು ಒಬ್ಬ ಶಿಷ್ಯನಾಗಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸುವುದಾಗಿ ಡಾ. ಜಿ.ವಿ. ಮಂಜುನಾಥ ತಿಳಿಸಿದ್ದಾರೆ.




