ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಸಮೀಪದ ಬನ್ನಿ ಮಂಟಪದ ಬಳಿ ಬುಧವಾರ ಸಂಜೆ ಭಕ್ತಾದಿಗಳ ಸಮ್ಮುಖದಲ್ಲಿ ದಸರಾ ಅಂಬಿನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ದಸರಾ ಹಬ್ಬದ ಅಂಗವಾಗಿ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಶ್ರೀ ತೇರುಮಲ್ಲೇಶ್ವರ ಸ್ವಾಮಿ, ಮೈಲಾರಲಿಂಗೇಶ್ವರ ಸ್ವಾಮಿ, ಶ್ರೀ ರಾಜಾ ದುರ್ಗಾಪರಮೇಶ್ವರಿ ದೇವಿ, ರೇವಣಸಿದ್ದೇಶ್ವರ ಸ್ವಾಮಿ, ಬನಶಂಕರಿ ದೇವಿ, ಹೊಸೂರಮ್ಮ, ಲಕ್ಷ್ಮೀನರಸಿಂಹಸ್ವಾಮಿ, ಕಾಳಿಕಾಂಬ ದೇವಿ, ವೀರಭದ್ರ ಸ್ವಾಮಿ, ಗೌರಸಂದ್ರ ಮಾರಮ್ಮ, ಹುಲಿಗಮ್ಮ ಹಾಗೂ ಪೌದಿಯಮ್ಮ ಸೇರಿದಂತೆ ವಿವಿಧ ದೇವತೆಗಳ ಉತ್ಸವ ಮೂರ್ತಿಗಳನ್ನು ವಿವಿಧ ವಾದ್ಯಮೇಳಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬನ್ನಿ ಮಂಟಪಕ್ಕೆ ಕರೆತರಲಾಯಿತು.
ತಹಸೀಲ್ದಾರ್ ಎಂ. ಸಿದ್ದೇಶ್ ಅವರು ಸಾಂಪ್ರದಾಯಿಕ ಉಡುಗೆ ಧರಿಸಿ, ಅಲಂಕೃತ ಪಲ್ಲಕ್ಕಿಯಲ್ಲಿ ತರಲಾಗಿದ್ದ ಬಿಲ್ಲು-ಬಾಣಗಳನ್ನು ಹಿಡಿದು ಬಾಣ ಪ್ರಯೋಗಿಸುವ ಮೂಲಕ ಅಂಬಿನೋತ್ಸವಕ್ಕೆ ಚಾಲನೆ ನೀಡಿದರು. ಬನ್ನಿ ಮರದಿಂದ ದೇವತೆಗಳನ್ನು ಪ್ರತಿಷ್ಠಾಪಿಸಿದ್ದ ಸ್ಥಳದವರೆಗೆ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಬಾಣ ಪ್ರಯೋಗ ನೆರವೇರಿತು.
ಅಂಬಿನೋತ್ಸವದ ನಂತರ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು. ಭಕ್ತಾದಿಗಳು ಬನ್ನಿ ಪತ್ರೆಯನ್ನು ಪರಸ್ಪರ ಹಂಚಿಕೊಂಡು ಪ್ರೀತಿ, ಸ್ನೇಹ, ಸೌಹಾರ್ದತೆ ಹಾಗೂ ಭಾವೈಕ್ಯತೆಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಈ ಸಮಾರಂಭದಲ್ಲಿ ಪೌರಾಯುಕ್ತರಾದ ಎ. ವಾಸೀಂ, ಬನ್ನಿ ಮಂಟಪ ಸಮಿತಿ ಅಧ್ಯಕ್ಷ ರಾಜಪ್ಪ, ಬಿಜೆಪಿ ಮುಖಂಡ ರಾಜಣ್ಣ, ಜೆಡಿಎಸ್ ಮುಖಂಡ ರವೀಂದ್ರಪ್ಪ, ಕಾಂಗ್ರೆಸ್ ಯುವ ಮುಖಂಡರಾದ ಸುಹಾಸ್ ಸುಧಾಕರ್, ನಾಗೇಂದ್ರ ನಾಯ್ಕ, ಪ್ರಮುಖರಾದ ಬೋಜಣ್ಣ, ಜಗದೀಶ್ ಬಂಡಾರಿ, ವೆಂಕಟೇಶ್, ಕಬ್ಬಡಿ ರವಿ, ಜ್ಞಾನೇಶ್, ಸತ್ಯನಾರಾಯಣಮೂರ್ತಿ, ಜಿ. ಎಲ್. ಮೂರ್ತಿ, ರಾಮಕುಮಾರ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.



