ಚಂದ್ರವಳ್ಳಿ ನ್ಯೂಸ್, ಜೈಪುರ:
ರಾಜಸ್ಥಾನದ ಜುಂಜುನು ಜಿಲ್ಲೆಯ ಉದಯಪುರವಾಟಿ ವ್ಯಾಪ್ತಿಯ ಛಪೋಲಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದ ಭೀಕರ ವಿದ್ಯುತ್ ಅವಘಡದಲ್ಲಿ ಎಂಟು ಮಂದಿ ಕಾರ್ಮಿಕರು ಮೃತಪಟ್ಟು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಛಪೋಲಿಯ ಕದಮ್ ಕುಂಡ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಜಲ್ಲಿಕಲ್ಲು ಮಿಶ್ರಣದ ಯಂತ್ರವು ಮೇಲಿನಿಂದ ಹಾದುಹೋಗಿದ್ದ 11,000 ವೋಲ್ಟ್ ಸಾಮರ್ಥ್ಯದ ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿದ್ದ ಕಾರ್ಮಿಕರು ದುರ್ಮರಣಕ್ಕೀಡಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಹಾಗೂ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಿರ್ಮಾಣ ಸ್ಥಳಗಳಲ್ಲಿ ವಹಿಸಬೇಕಾದ ಸುರಕ್ಷತಾ ಕ್ರಮಗಳು ಮತ್ತು ನಿರ್ಲಕ್ಷ್ಯದ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗಿದೆ.




