ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿ ಬೆಂಗಳೂರಿನಲ್ಲಿ ಸ್ಫೋಟಕಗಳ ಭೀತಿ ಹೆಚ್ಚಾಗಿದ್ದು, ನಗರದ ಪುಲಿಕೇಶಿನಗರದಲ್ಲಿ ಇತ್ತೀಚೆಗಷ್ಟೇ ಸಂಭವಿಸಿದ ಐಇಡಿ ಸ್ಫೋಟದ ಬಿಸಿ ಆರುವ ಮುನ್ನವೇ, ಇದೀಗ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿ ಆತಂಕ ಸೃಷ್ಟಿಸಿದೆ.
ಸೊಣ್ಣೇನಹಳ್ಳಿ ಸರ್ಕಲ್ ಬಳಿ ಪ್ರತ್ಯಕ್ಷ: ಜ್ಞಾನಭಾರತಿಯ ಸೊಣ್ಣೇನಹಳ್ಳಿ ಸರ್ಕಲ್ ಬಳಿ ಬಂಡೆಗಳನ್ನು ಸ್ಫೋಟಿಸಲು (ಕ್ವಾರಿ ಕೆಲಸಗಳಿಗೆ) ಬಳಸಲಾಗುವ ಡೈನಾಮೆಟ್ ಮಾದರಿಯ ಸ್ಫೋಟಕ ವಸ್ತು ಕ್ರಿಯಾಶೀಲ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ವಿಷಯ ತಿಳಿದ ತಕ್ಷಣವೇ ಜ್ಞಾನಭಾರತಿ ಠಾಣೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.
ಕ್ವಾರಿಗೆ ಬಳಸುವ ಈ ಅಪಾಯಕಾರಿ ಸ್ಫೋಟಕ ವಸ್ತುವನ್ನು ಜನನಿಬಿಡ ಪ್ರದೇಶದ ಬಳಿ ತಂದು ಇಟ್ಟವರು ಯಾರು? ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.
ಹಿನ್ನೆಲೆ: ಪುಲಿಕೇಶಿನಗರದ ಘೋರ ಘಟನೆ
ಇತ್ತೀಚೆಗೆ (ಅಕ್ಟೋಬರ್ 20 ರಂದು) ಪುಲಿಕೇಶಿನಗರದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಪಾರ್ಸೆಲ್ ರೂಪದಲ್ಲಿದ್ದ ಟಾರ್ಚ್ ಬ್ಯಾಟರಿಯನ್ನು ಆನ್ ಮಾಡಲು ಹೋದಾಗ ಭೀಕರ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಅಲ್ಲಾವುದ್ದೀನ್ ಹಾಗೂ ಉತ್ತರ ಪ್ರದೇಶ ಮೂಲದ ಪೇಂಟರ್ ಸೂರಜ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು.
ಈ ಘಟನೆಯ ತನಿಖೆ ನಡೆಯುತ್ತಿರುವಾಗಲೇ ಜ್ಞಾನಭಾರತಿ ಬಳಿ ಡೈನಾಮೆಟ್ ಮಾದರಿಯ ವಸ್ತು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಭಾರೀ ಭೀತಿಯನ್ನು ಉಂಟುಮಾಡಿದೆ. ಪೊಲೀಸರು ಸದ್ಯ ಇಡೀ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.




