ಚಿಕ್ಕಮಗಳೂರು ನಕಲಿ ತುಪ್ಪ ದಂಧೆ: ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿ.ಟಿ. ರವಿ ಆಗ್ರಹ
ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ನಕಲಿ ತುಪ್ಪದ ದಂಧೆ ಕೇವಲ ವಂಚನೆಯಲ್ಲ, ಬದಲಾಗಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಗಂಭೀರ ಅಪರಾಧವಾಗಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣದ ಹಿಂದಿರುವ ಜಾಲವನ್ನು ಸಂಪೂರ್ಣವಾಗಿ ಬಯಲಿಗೆಳೆದು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ತುಪ್ಪ, ಹಸುವಿನ ಹಾಲು ಹಾಗೂ ಬೆಣ್ಣೆಯಂತಹ ಉತ್ಪನ್ನಗಳು ಅತ್ಯಂತ ಪೌಷ್ಠಿಕ ಮತ್ತು ಆರೋಗ್ಯಕರ ಎಂಬ ನಂಬಿಕೆಯಿಂದ ಜನರು ಖರೀದಿಸುತ್ತಾರೆ. ಇಂತಹ ಆಹಾರ ಪದಾರ್ಥಗಳಲ್ಲೇ ಕಲಬೆರಕೆ ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ಅತ್ಯಂತ ಆಘಾತಕಾರಿ ವಿಚಾರ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸಂಪೂರ್ಣ ತನಿಖೆ: ಚಿಕ್ಕಮಗಳೂರಿನಲ್ಲಿ ಪತ್ತೆಯಾಗಿರುವ ಈ ಅಕ್ರಮ ತುಪ್ಪ ತಯಾರಿಕಾ ದಂಧೆಯ ಸಂಪೂರ್ಣ ಜಾಲವನ್ನು ಹೊರತರಲು ತಕ್ಷಣವೇ ಕೂಲಂಕಷ ತನಿಖೆ ನಡೆಸಬೇಕು.
ನಿರ್ದಾಕ್ಷಿಣ್ಯ ಕ್ರಮ: ಈ ದಂಧೆಯ ಹಿಂದೆ ಎಷ್ಟೇ ಪ್ರಭಾವಿ ವ್ಯಕ್ತಿಗಳಿದ್ದರೂ ಯಾವುದೇ ಕಾರಣಕ್ಕೂ ರಕ್ಷಿಸದೆ, ನಿರ್ದಾಕ್ಷಿಣ್ಯವಾಗಿ ಬಂದಿಸಿ ಸೂಕ್ತ ಕಾನೂನಾತ್ಮಕ ಶಿಕ್ಷೆಗೆ ಒಳಪಡಿಸಬೇಕು.
ಆರೋಗ್ಯದ ವಿಷಯದಲ್ಲಿ ರಾಜಿ ಇಲ್ಲ: ಜನರ ಆರೋಗ್ಯ ಮತ್ತು ಜೀವದ ಜೊತೆ ಆಟವಾಡುವ ಆಹಾರ ಕಲಬೆರಕೆಕೋರರ ವಿರುದ್ಧ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಕಠಿಣ ಹೆಜ್ಜೆ ಇಡಬೇಕು.



