ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ದೇವಾಲಯಗಳಿಗೆ ಹೋಗುವುದು ಆಚಾರ, ವಿಚಾರ ಮತ್ತು ಉತ್ತಮ ಸಂಸ್ಕಾರಗಳನ್ನು ಕಲಿಯುವುದಕ್ಕಾಗಿಯೇ ಹೊರತು ಮೂಢನಂಬಿಕೆಗಳಿಗೆ ದಾಸರಾಗುವುದಕ್ಕಲ್ಲ. ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವದತ್ತ ಸಾಗಬೇಕು ಎಂದು ಶ್ರೀ ಮಾದರ ಚನ್ನಯ್ಯ ಸ್ವಾಮೀಜಿ ಕರೆ ನೀಡಿದರು.
ತಾಲೂಕಿನ ಕೂನಿಕೆರೆ ಗ್ರಾಮದ ಶ್ರೀ ಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ನೂತನ ದೇವಸ್ಥಾನದ ಗುದ್ದಲಿ ಪೂಜೆ ನೆರವೇರಿಸಿ, ದೀಪ ಬೆಳಗಿಸುವ ಮೂಲಕ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕವೇ ಕೈಲಾಸ: ಬರೀ ಲಕ್ಷ್ಮಿ ಪೂಜೆ ಮಾಡುವುದರಿಂದ ಹಣ ಬರುವುದಿಲ್ಲ. ಪ್ರಾಮಾಣಿಕವಾಗಿ ಕಾಯಕ (ಕೆಲಸ) ಮಾಡಿದಾಗ ಮಾತ್ರ ಲಕ್ಷ್ಮಿ ತಾನಾಗಿಯೇ ಒಲಿಯುತ್ತಾಳೆ.
ಮೂಢನಂಬಿಕೆ ತಡೆ: ಮಳೆ ಬರಲಿಲ್ಲವೆಂದು ಕತ್ತೆಗೆ ಪೂಜೆ ಮಾಡುವುದು ಅಥವಾ ಕಪ್ಪೆಗಳಿಗೆ ಮದುವೆ ಮಾಡಿಸುವುದು ಬರಿ ಮೂಢನಂಬಿಕೆ. ಅರಣ್ಯ, ಬೆಟ್ಟ-ಗುಡ್ಡಗಳು ಹಾಗೂ ಸರೋವರಗಳನ್ನು ರಕ್ಷಿಸಿ ಗಿಡ-ಮರಗಳನ್ನು ಬೆಳೆಸಿದರೆ ಮಾತ್ರ ಮೋಡಗಳು ತಡೆದು ಮಳೆಯಾಗುತ್ತದೆ.
ಸಂಸ್ಕೃತಿ ರಕ್ಷಣೆ: ನಮ್ಮ ಮೂಲ ಸಂಸ್ಕೃತಿಯ ಸಂಕೇತವಾಗಿ ಪ್ರತಿಯೊಂದು ಹಳ್ಳಿಯಲ್ಲೂ ದೇವಾಲಯಗಳಿರುತ್ತವೆ. ಜೀವನದಲ್ಲಿ ನಂಬಿಕೆ ಇರಲಿ, ಆದರೆ ಮೂಢನಂಬಿಕೆಗಳಿಂದ ಎಲ್ಲರೂ ದೂರವಿರಬೇಕು.
ಈ ಶುಭ ಸಮಾರಂಭದಲ್ಲಿ ಶ್ರೀ ಲಕ್ಷ್ಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಕೆ. ಹನುಮಂತಪ್ಪ, ಆಂಜನೇಯ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಶಿವಾನಂದ್, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಕೆ. ಹನುಮಂತರಾಯ, ಮುಖಂಡರಾದ ಮೂಡಪ್ಪ, ಹೆಚ್. ನಿಂಗಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಈರಣ್ಣ, ಮಾಜಿ ಸದಸ್ಯರಾದ ತಿಪ್ಪೇಸ್ವಾಮಿ, ನರಸಿಂಹಮೂರ್ತಿ ದೊಡ್ಡಘಟ್ಟ, ನರಸಿಂಗಜ್ಜ, ಉಮೇಶ್, ಕಲಾವಿದರಾದ ಶ್ರೀಮತಿ ಲಕ್ಷ್ಮಿ, ಹೆಚ್.ಎಸ್. ಕೂನಿಕೆರೆ ಮಾರುತೇಶ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



