ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಇಲ್ಲಿನ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ (Senior Health Inspector) ಶ್ರೀಮತಿ ಸಂಧ್ಯಾ ವೈ.ಎಸ್. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಿ ಹಿರಿಯೂರು ನಗರಸಭೆ ಪೌರಾಯುಕ್ತರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ನಗರಸಭೆಯ ಕಾರ್ಯಾಲಯದಿಂದ ದಿನಾಂಕ 12/06/2026 ರಂದು ಹೊರಡಿಸಲಾದ ಜ್ಞಾಪನಾ ಪತ್ರದ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ನಗರ ಜಿಲ್ಲೆಗೆ ವರ್ಗಾವಣೆ:
ಪೌರಾಡಳಿತ ನಿರ್ದೇಶನಾಲಯದ ಆದೇಶದನ್ವಯ, ಶ್ರೀಮತಿ ಸಂಧ್ಯಾ ವೈ.ಎಸ್. ಅವರನ್ನು ಸ್ವಂತ ವೇತನ ಶ್ರೇಣಿಯ ಮೇಲೆ ಬೆಂಗಳೂರು ನಗರ ಜಿಲ್ಲೆಯ ಯಾವುದಾದರೊಂದು ಪುರಸಭೆ ಅಥವಾ ಪಟ್ಟಣ ಪಂಚಾಯಿತಿಗೆ ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಹಿರಿಯೂರು ನಗರಸಭೆಯ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.
ಪ್ರಭಾರ ಹಸ್ತಾಂತರಕ್ಕೆ ಸೂಚನೆ:
ವರ್ಗಾವಣೆಗೊಂಡಿರುವ ಶ್ರೀಮತಿ ಸಂಧ್ಯಾ ವೈ.ಎಸ್. ಅವರು ತಮ್ಮ ಬಳಿಯಿದ್ದ ಹಿರಿಯ ಆರೋಗ್ಯ ನಿರೀಕ್ಷಕರ ಹುದ್ದೆಯ ಸಂಪೂರ್ಣ ಪ್ರಭಾರವನ್ನು ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀ ನಯಾಜ್ ಶರೀಫ್ ಡಿ. ಅವರಿಗೆ ತಕ್ಷಣವೇ ಹಸ್ತಾಂತರಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಅಲ್ಲದೆ, ಕರ್ತವ್ಯದಿಂದ ಬಿಡುಗಡೆಯಾದ ಬಗ್ಗೆ ಪೌರಾಡಳಿತ ನಿರ್ದೇಶನಾಲಯ ಹಾಗೂ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಈ ಅಧಿಕೃತ ಜ್ಞಾಪನಾ ಪತ್ರದ ಪ್ರತಿಗಳನ್ನು ಸರ್ಕಾರದ ಅಧೀನ ಕಾರ್ಯದರ್ಶಿಗಳು (ನಗರಾಭಿವೃದ್ಧಿ ಇಲಾಖೆ), ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸೇರಿದಂತೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಗಮನಕ್ಕೆ ರವಾನಿಸಲಾಗಿದೆ ಎಂದು ಹಿರಿಯೂರು ನಗರಸಭೆ ಪೌರಾಯುಕ್ತ ಎ.ವಾಸೀಂ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯ ಎಂ.ಡಿ ಸಣ್ಣಪ್ಪ ಮಾತನಾಡಿ ಹಿರಿಯ ಆರೋಗ್ಯ ನಿರೀಕ್ಷಕರಾದ ಸಂಧ್ಯಾ ವೈ.ಎಸ್. ಅವರು ಅತ್ಯಂತ ನಿಷ್ಠೆ, ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದು ಇವರನ್ನು ನಗರಸಭೆಯಿಂದ ಕಳುಹಿಸಲು ನೋವಾಗುತ್ತಿದೆ. ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದ ಸಂಧ್ಯಾ ಅವರು ದಕ್ಷ ರೀತಿಯಲ್ಲಿ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.
ನಗರಸಭೆ ವ್ಯವಸ್ಥಾಪಕಿ ಬಿ.ಆರ್ ಮಂಜುಳಾ, ಪೌರಾಯುಕ್ತ ವಾಸೀಂ ಅವರು ಸಂಧ್ಯಾ ಅವರಿಗೆ ವರ್ಗಾವಣೆಯ ಬಿಡುಗಡೆ ಪತ್ರವನ್ನು ಹಸ್ತಾಂತರಿಸಿದರು.



