ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರೈತರಿಗೆ ಹೆಚ್ಚಿನ ಇಳುವರಿ ನೀಡುವ ಮತ್ತು ಬರವನ್ನು ತಡೆದುಕೊಳ್ಳುವ ಸುಧಾರಿತ ಶೇಂಗಾ ತಳಿಗಳನ್ನು ಪರಿಚಯಿಸುವ ತುರ್ತು ಅಗತ್ಯವಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ಮಂಜುನಾಥ ಬಿ. ಅಭಿಪ್ರಾಯಪಟ್ಟರು.
ನಗರದ ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದ್ದ 'ಶೇಂಗಾ ಬೆಳೆಯ ಕ್ಷೇತ್ರೋತ್ಸವ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಪ ಕೃಷಿ ನಿರ್ದೇಶಕ ಡಾ. ಉಮೇಶ್ ಮಾತನಾಡಿ, "ಪ್ರಾತ್ಯಕ್ಷಿಕೆ ತಾಕುಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತಿರುವ ಹೊಸ ಶೇಂಗಾ ತಳಿಗಳನ್ನು ಬೀಜೋತ್ಪಾದನೆಯ ಸರಪಳಿಗೆ ತರಲು ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ" ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ತಿಪ್ಪೇಶ್ ಡಿ. ವಹಿಸಿದ್ದರು.
ತಜ್ಞರಿಂದ ಮಾಹಿತಿ: ತಳಿ ವಿಜ್ಞಾನಿ ಡಾ. ಮೋಹನ್ ಕುಮಾರ್ ಎನ್. ವಿ. ಶೇಂಗಾದ ವಿವಿಧ ಸುಧಾರಿತ ತಳಿಗಳ ವಿಶ್ಲೇಷಣೆ ಹಾಗೂ ಇಳುವರಿ ಸಾಮರ್ಥ್ಯದ ಬಗ್ಗೆ ಮಾಹಿತಿ ನೀಡಿದರು.
ಕೀಟಶಾಸ್ತ್ರ ಪ್ರಾಧ್ಯಾಪಕ ಡಾ. ಹನುಮಂತರಾಯ ಹಾಗೂ ಡಾ. ರುದ್ರಮುನಿ ಅವರು ಶೇಂಗಾ ಬೆಳೆಗೆ ಬರುವ ಕೀಟ ಮತ್ತು ರೋಗಗಳ ಸಮಗ್ರ ಹತೋಟಿ ಕ್ರಮಗಳ ಕುರಿತು ರೈತರಿಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕೆ.ವಿ.ಕೆ. ವಿಜ್ಞಾನಿ ಡಾ. ಎಸ್. ಓಂಕಾರಪ್ಪ, ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಕುಮಾರ್ ನಾಯ್ಕ ಎ.ಹೆಚ್., ಕೃಷಿ ನಿರ್ದೇಶಕ ಡಾ. ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಹ ಸಂಶೋಧನಾ ನಿರ್ದೇಶಕ ಡಾ. ಧನಂಜಯ ಬಿ. ಸ್ವಾಗತಿಸಿದರು, ಡಾ. ಶಿವಲೀಲಾ ಎಸ್. ನಿರೂಪಿಸಿದರು ಹಾಗೂ ಕುಕನೂರ್ ವಂದಿಸಿದರು. ಕ್ಷೇತ್ರೋತ್ಸವದಲ್ಲಿ ಸುತ್ತಮುತ್ತಲಿನ ನೂರಾರು ರೈತರು ಭಾಗವಹಿಸಿ ಮಾಹಿತಿ ಪಡೆದರು.




