ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೇಕೆದಾಟು ಜಲಾಶಯ ಯೋಜನೆಗೆ ಅಂತಿಮ ಅನುಮತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಡಿದ ಮನವಿಗೆ ತಮಿಳುನಾಡು ಕಾಂಗ್ರೆಸ್ ಘಟಕ ವಿರೋಧ ವ್ಯಕ್ತಪಡಿಸಿರುವುದು, ಇದೀಗ ಕರ್ನಾಟಕ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ಕಾಂಗ್ರೆಸ್ ಘಟಕವೇ ಮೇಕೆದಾಟು ಯೋಜನೆಯನ್ನು ಕಾನೂನುಬಾಹಿರ ಎಂದು ವಿರೋಧಿಸುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿ ಅವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿರುವ ಅಶೋಕ್, ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ರಾಜಕೀಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅರಣ್ಯ ನಾಶದ ಕುರಿತು ಪರಿಸರವಾದಿಗಳ ಆತಂಕವಿರುವುದರಿಂದ ಕೇಂದ್ರ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದು, ರಾಜ್ಯ ಸರ್ಕಾರವು ಸರಿಯಾದ ದಾಖಲೆಗಳೊಂದಿಗೆ ಕೇಂದ್ರದ ಮನವೊಲಿಸಬೇಕು ಹಾಗೂ ಯೋಜನೆ ಸಾಕಾರಗೊಳ್ಳಲು ಬಿಜೆಪಿ ಸರ್ಕಾರವೇ ಬರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದೆಡೆ, ತಮಿಳುನಾಡು ಕಾಂಗ್ರೆಸ್ ವಿರೋಧದ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಮೇಕೆದಾಟು ವಿಚಾರವನ್ನು ಈಗಾಗಲೇ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.
ದೇಶದ ಕಾನೂನು ಮತ್ತು ನ್ಯಾಯಾಲಯದ ತೀರ್ಪನ್ನು ಎಲ್ಲರೂ ಗೌರವಿಸಬೇಕು ಎಂದಿರುವ ಅವರು, ರಾಜಕೀಯವಾಗಿ ಯೋಜನೆಯನ್ನು ವಿರೋಧಿಸುವ ಹಕ್ಕು ಅವರಿಗಿದೆ, ನಾವು ಅವರ ಧ್ವನಿಯನ್ನು ಹತ್ತಿಕ್ಕುವುದಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡಿನ ಕಾನೂನು ತಂಡವು ಈ ವಿಷಯದ ಕಾನೂನಾತ್ಮಕ ಅಂಶಗಳನ್ನು ಅರ್ಥಮಾಡಿಕೊಳ್ಳಲಿ ಎಂದಿರುವ ಶಿವಕುಮಾರ್, ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾಡಬೇಕಾದ ಕೆಲಸವನ್ನು ಖಂಡಿತವಾಗಿ ಮಾಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.




