ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರವು ಆಡಳಿತಾತ್ಮಕ ದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇಬ್ಬರು ಐಪಿಎಸ್ ಹಾಗೂ 23 ಕೆಎಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಕುರಿತು ಪ್ರತ್ಯೇಕ ಅಧಿಸೂಚನೆಗಳನ್ನು ಪ್ರಕಟಿಸಿದೆ.
ಪ್ರಮುಖ ವರ್ಗಾವಣೆಗಳ ವಿವರ: ಮೈಸೂರಿಗೆ ನೂತನ ಪೊಲೀಸ್ ಆಯುಕ್ತರು: ಮೈಸೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಾ ಲಾಟ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಸದ್ಯಕ್ಕೆ ಯಾವುದೇ ಸ್ಥಳ ನಿಯುಕ್ತಿ ಮಾಡಿಲ್ಲ. ಅವರ ಸ್ಥಾನಕ್ಕೆ ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ) ನಿರ್ದೇಶಕರಾಗಿದ್ದ 2012ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಎನ್. ವಿಷ್ಣುವರ್ಧನ ಅವರನ್ನು ನೇಮಿಸಲಾಗಿದೆ.
ಮುಡಾಗೆ ಹೊಸ ಆಯುಕ್ತರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿದ್ದ ಇಸ್ಲಾವುದ್ದೀನ್ ಗದ್ಯಾಳ್ ಅವರನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ. ತೆರವಾದ ಕೆಇಎ ಆಡಳಿತಾಧಿಕಾರಿ ಹುದ್ದೆಗೆ ಹಾಸನ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಅವರನ್ನು ನಿಯೋಜಿಸಲಾಗಿದೆ.
ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ನೂತನ ಎಂಡಿ: ಕಂದಾಯ ಆಯುಕ್ತಾಲಯದ ಅಪರ ಆಯುಕ್ತೆ ನೂರ್ ಜಹರಾ ಖಾನಂ ಅವರನ್ನು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಈ ಹುದ್ದೆಯಲ್ಲಿದ್ದ ಐಎಎಸ್ ಅಧಿಕಾರಿ ಸಿ. ಸತ್ಯಭಾಮ ಅವರಿಗೆ ಸ್ಥಳ ನಿಯುಕ್ತಿಗಾಗಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಇತರ ಪ್ರಮುಖ ಕೆಎಎಸ್ ಅಧಿಕಾರಿಗಳ ನಿಯುಕ್ತಿ: ಮಾರುತಿ ಬ್ಯಾಕೋಡ್: ಆಯುಕ್ತರು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ, ಕಮಲಾಬಾಯಿ ಬಿ.: ಜಂಟಿ ನಿರ್ದೇಶಕರು, ಕರ್ನಾಟಕ ಮುನಿಸಿಪಲ್ ಡೇಟಾ ಸೊಸೈಟಿ, ಬೆಂಗಳೂರು.
ಮಂಜುನಾಥ್ ಕೆ.: ಉಪ ವಿಭಾಗಾಧಿಕಾರಿ, ತುಮಕೂರು ಉಪ ವಿಭಾಗ, ನಹಿದಾ ಜಮ್ ಜಮ್: ವಿಶೇಷ ಭೂಸ್ವಾಧೀನಾಧಿಕಾರಿ, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್-07 (ಬಿಡಿಎ), ಜಿ.ಎಚ್. ಸತ್ಯನಾರಾಯಣ: ಉಪವಿಭಾಗಾಧಿಕಾರಿ, ಸಾಗರ ಉಪವಿಭಾಗ (ಶಿವಮೊಗ್ಗ).
ಜಂಬಗಿ ರೇಣುಕಾಪ್ರಸಾದ್ ದಿಲೀಪ್: ರಾಜ್ಯ ಪ್ರತಿನಿಧಿ-1, ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ, ಬೆಂಗಳೂರು, ಪಾರ್ವತಿ: ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣಾ ಮೇಲ್ದಂಡೆ ಯೋಜನೆ, ದೇವದುರ್ಗ, ನಯೀಂ ಉನ್ನೀಸಾ ಆರ್.: ಪ್ರಸ್ತುತ ಹುದ್ದೆಯ ಜೊತೆಗೆ ರಾಜ್ಯ ಚುನಾವಣಾ ಆಯೋಗದ ತಹಶೀಲ್ದಾರ್ ಹುದ್ದೆಗೆ ಹೆಚ್ಚುವರಿ ಪ್ರಭಾರ.
ಹಿಂದಿನ ವರ್ಗಾವಣೆ ಆದೇಶದಲ್ಲಿ ಮಾರ್ಪಾಡು: ಈ ಹಿಂದೆ ವರ್ಗಾವಣೆಗೊಂಡಿದ್ದ 12 ಕೆಎಎಸ್ ಅಧಿಕಾರಿಗಳ ಸ್ಥಳ ನಿಯುಕ್ತಿಯಲ್ಲಿ ಸರ್ಕಾರ ಮಾರ್ಪಾಡು ಮಾಡಿದೆ. ಪ್ರಮುಖವಾಗಿ ಪ್ರಕಾಶ್ ಎಂ. ನಾಶಿ ಅವರನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಆಯುಕ್ತರನ್ನಾಗಿ, ಡಾ. ನಯನ ಎಂ. ಅವರನ್ನು ಕೋಲಾರ ಉಪವಿಭಾಗಾಧಿಕಾರಿಯನ್ನಾಗಿ, ಸಂತೋಷ್ ರಾಣಿ ಅವರನ್ನು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯನ್ನಾಗಿ ಹಾಗೂ ನಾಗಮ್ಮ ಅವರನ್ನು ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯನ್ನಾಗಿ ಮಾರ್ಪಡಿಸಿ ಆದೇಶಿಸಲಾಗಿದೆ.




