ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆ ರದ್ದು ಮಾಡಬೇಕು ಮತ್ತು ವಿದ್ಯುತ್ ಖಾಸಗೀಕರಣ ಕೈ ಬಿಡುವಂತೆ ಆಗ್ರಹಿಸಿ ಎಸ್‌ಕೆಎಂ ಮತ್ತು ಜೆಸಿಟಿಯು ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಜೈಲ್ ಬರೋ ಚಳುವಳಿ ನಡೆಸಿ ಉಪವಿಭಾಗಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಈ ವೇಳೆ ಮಾತನಾಡಿದ ಸಿಪಿಐಎಂ ಮುಖಂಡ ಆರ್.ಚಂದ್ರತೇಜಸ್ವಿ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ, ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ ಹಾಗೂ ಯುವಜನ ವಿರೋಧಿ ಕಾನೂನು, ನೀತಿ ಜಾರಿಯೊಂದಿಗೆ ಪ್ರಜಾಪ್ರಭುತ್ವ ಹಕ್ಕು ದಮನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಐತಿಹಾಸಿಕ ಕ್ವಿಟ್ ಇಂಡಿಯಾ ಚಳವಳಿಯ ನೆನಪು ಮತ್ತು ಸ್ಫೂರ್ತಿಯಲ್ಲಿ ದೇಶದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಪೊರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ ಘೋಷಣೆಯಡಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಅಂದು ರಾಜರು ರೈತರ ಭೂಮಿ ಕಸಿದು ಬ್ರಾಹ್ಮಣರಿಗೆ, ರಾಜ ಪರಿವಾರಗಳಿಗೆ ನೀಡಿದ್ದಂತೆ ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ರೈತರ ಭೂಮಿಯನ್ನು ಅಂಬಾನಿ, ಆಧಾನಿ ಮುಂತಾದ ದೇಶಿ ಹಾಗೂ ವಿದೇಶಿ ಕಂಪನಿಗಳ ಬಕಾಸುರ ಬಾಯಿಗೆ ಹಾಕುತ್ತಿವೆ ಎಂದು ದೂರಿದರು.
ತಾಲ್ಲೂ ಕಚೇರಿ ಒಳ ನುಗ್ಗಿದ ಪ್ರತಿಭಟನಾಕಾರರು:
ಪ್ರತಿಭಟನಾ ವೇಳೆ ತಾಲ್ಲೂಕು ಕಚೇರಿ ಆವರಣದ ಒಳಗೆ ನುಗ್ಗಿದ ಪ್ರತಿಭಟನಕಾರರು, ಧರಣಿ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ತಾಲ್ಲೂಕು ಕಚೇರಿ ಸಮೀಪದ ಜಗಜ್ಯೋತಿ ಬಸವೇಶ್ವರ ವೃತ್ತದಿಂದ ಮೆರವಣಿಗೆಯಲ್ಲಿ ಬಂದ ವಿವಿಧ ರೈತ, ಕಾರ್ಮಿಕ ಸಂಘಟನೆ ಕಾರ್ಯಕರ್ತರು ತಾಲ್ಲೂಕು ಕಚೇರಿ ಒಳಗೆ ನುಗ್ಗಲು ಯತ್ನಿಸಿದರು. ಪೊಲೀಸರು ತಾಲ್ಲೂಕು ಕಚೇರಿ ಗೇಟ್‌ಗಳನ್ನು ತಡೆದು ಪ್ರತಿಭಟನಕಾರರು ಒಳಗೆ ನುಗ್ಗದಂತೆ ತಡೆಯೊಡ್ಡಿದರು.
ಆದರೆ ಪ್ರತಿಭಟನಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಪೊಲೀಸರನ್ನು ಹಾಗೂ ಕಚೇರಿಯ ಹೆಬ್ಬಾಗಿಲು ತಳ್ಳಿಕೊಂಡು ಒಳ ನುಗ್ಗಿ ಪ್ರತಿಭಟಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ತಾಲ್ಲೂಕು ಕಚೇರಿಯಿಂದ ಪ್ರತಿಭಟನಕಾರರನ್ನು ಹೊರಗೆ ಕಳುಹಿಸಿದರು.
ಈ ವೇಳೆ ಕಾರ್ಮಿಕ ಸಂಘಟನೆಗಳ ಮುಖಂಡರಾದ ಪಿ.ಎ.ವೆಂಕಟೇಶ್ ಮತ್ತು ರೇಣುಕಾರಾಧ್ಯ ಅವರನ್ನು ವಶಕ್ಕೆ ಪಡೆದ ಪೊಲೀಸರು ಜೀಪ್‌ನಲ್ಲಿ ಹತ್ತಿಸಿಕೊಂಡು ಹೊರಟರು. ತಕ್ಷಣ ಪೊಲೀಸ್ ಜೀಪ್ ಅಡ್ಡಗಟ್ಟಿದ ಪ್ರತಿಭಟನಾಕಾರರು ಕಾರ್ಮಿಕ ಮುಖಂಡರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಜೋರಾಗಿ ಮಳೆ ಬಂದ ಕಾರಣ ಪ್ರತಿಭಟನಾಕಾರರನ್ನು ಪಕ್ಕಕ್ಕೆ ತಳ್ಳಿದ ಪೊಲೀಸರು ಕಾರ್ಮಿಕ ಮುಖಂಡರನ್ನು ಠಾಣೆಗೆ ಕರೆದೊಯ್ದರು. ಬಂದಿತ ಮುಖಂಡರನ್ನು ಬಿಡುಗಡೆಗೊಳಿಸುವಂತೆ ಎಸಿ ಕಚೇರಿ ಮುಂದೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಯಿತು.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕಾರ್ಮಿಕ ನೀತಿಗಳನ್ನು ಖಂಡಿಸಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಬಂಧಿತ ಕಾರ್ಮಿಕ ಮುಖಂಡರನ್ನು ಬಿಡುಗಡೆ ಮಾಡಿದರು.
ಬೇಡಿಕೆಗಳು:
ಸುಪ್ರೀಂಕೋರ್ಟ್ ಆದೇಶದಂತೆ ಪರಿಷ್ಕೃತ ಕನಿಷ್ಠ ವೇತನ ಜಾರಿ ಮಾಡಬೇಕು. ನಾಲ್ಕು ಕಾರ್ಮಿಕ ಸಂಹಿತೆ ರದ್ದಾಗಬೇಕು.
ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ-ಕಾರ್ಪೊರೇಟ್ ಭೂ ಕಬಳಿಕೆ ನಿಲ್ಲಿಸಬೇಕು.
ವಿ.ಬಿ ಗ್ರಾಮ್ ಜಿ ಕಾಯ್ದೆ ರದ್ದುಪಡಿಸಬೇಕು, ವಿದ್ಯುತ್‌ತಿದ್ದುಪಡಿ ಕಾಯ್ದೆ 2025 ರದ್ದಾಗಬೇಕು, ಬೀಜ ಕಾಯ್ದೆ ಮತ್ತು ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ಧೋರಣಾ ಚೌಕಟ್ಟು ನೀತಿ ರದ್ದಾಗಬೇಕು *ಬ್ಯಾಂಕ್, ವಿಮೆ, ಆರೋಗ್ಯ, ಶಿಕ್ಷಣ ಖಾಸಗೀಕರಣ ನಿಲ್ಲಿಸಬೇಕು.
ಪ್ರತಿಭಟನೆಯಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಪ್ರಭ ಬೆಳವಂಗಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರುದ್ರಾರಾಧ್ಯ, ದೊಡ್ಡಬೆಳವಂಗಲ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಶಶಿಧರ್, ದೇವನಹಳ್ಳಿ ರೈತ ಮುಖಂಡರಾದ ಕಾರಹಳ್ಳಿ ಶ್ರೀನಿವಾಸ್, ಮಾರೇಗೌಡ, ಹೊಸಕೋಟೆ ವೆಂಕಟರಾಜು, ದಲಿತ ಮುಖಂಡ ಗೂಳ್ಯ ಹನುಮಣ್ಣ ಸೇರಿದಂತೆ ನೂರಾರು ಜನ ರೈತ ಕಾರ್ಮಿಕರು, ಮುಖಂಡರು ಭಾಗವಹಿಸಿದ್ದರು.



