ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ, ಕನ್ನಡಿಗ ಹಾಗೂ ಕರ್ನಾಟಕವನ್ನು ವ್ಯಂಗ್ಯವಾಗಿ ಹೀಯಾಳಿಸಿ ಪೋಸ್ಟ್ ಹಂಚಿಕೊಂಡಿರುವ ತಮಿಳುನಾಡು ಕೆಡರ್ನ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಈ ಅಧಿಕಾರಿಯ ಉದ್ಧಟತನವನ್ನು ಕಟುವಾಗಿ ಖಂಡಿಸಲಾಗಿದ್ದು, ಅವರು ತಕ್ಷಣವೇ ಕರ್ನಾಟಕದ ಜನತೆಯ ಕ್ಷಮೆಯಾಚಿಸಬೇಕು ಹಾಗೂ ಅವರ ವಿರುದ್ಧ ತಮಿಳುನಾಡು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಸೌಹಾರ್ದತೆ ಮತ್ತು ಸಹೋದರತೆಗೆ ಹೆಸರಾದ ಕನ್ನಡಿಗರು ನಾಡು, ನುಡಿ ಹಾಗೂ ಜಲ ಸಂರಕ್ಷಣೆಯ ವಿಚಾರ ಬಂದಾಗ ಎಂದಿಗೂ ಹಿಂಜರಿಯುವುದಿಲ್ಲ. ಕರ್ನಾಟಕದ ನೆಲ-ಜಲ ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆಯುವ ಉದ್ಯಮಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕೆಂದು ಕನ್ನಡ ಪರ ಸಂಘಟನೆಗಳು ನಡೆಸುವ ಹೋರಾಟವನ್ನು ವ್ಯಂಗ್ಯ ಮಾಡುವುದು ಅಸಹಿಷ್ಣುತೆ ಹಾಗೂ ಸಂಕುಚಿತ ಮನೋಭಾವವನ್ನು ಎತ್ತಿ ತೋರಿಸುತ್ತದೆ.
ಕಾನೂನು ಸುವ್ಯವಸ್ಥೆಯ ಜವಾಬ್ದಾರಿಯುತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಭಾಷಿಕ ಬಾಂಧವ್ಯದಲ್ಲಿ ಬಿರುಕು ಮೂಡಿಸುವಂತಹ ವಿಕೃತ ಪೋಸ್ಟ್ ಹಾಕಿರುವುದು ಅಕ್ಷಮ್ಯ. ತಮಿಳುನಾಡಿನಲ್ಲಿ ತಮಿಳು ಭಾಷಿಕರಿಗೆ ಆದ್ಯತೆ ನೀಡುವಂತೆಯೇ, ಕರ್ನಾಟಕದಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಆದ್ಯತೆ ನೀಡುವುದು ಸಹಜ ನ್ಯಾಯವಾಗಿದೆ.
ಸಾಮಾಜಿಕ ಜಾಲತಾಣಗಳಿಂದ ಪೋಸ್ಟ್ ಅಳಿಸಬಹುದಾದರೂ ಕನ್ನಡಿಗರ ಸ್ವಾಭಿಮಾನಕ್ಕೆ ಆಗಿರುವ ಅವಮಾನವನ್ನು ಅಳಿಸಲು ಸಾಧ್ಯವಿಲ್ಲ. ಕನ್ನಡಿಗರ ಶಕ್ತಿ ಮತ್ತು ಸಾಮರ್ಥ್ಯದ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.




