LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕದ ಹಿತಾಸಕ್ತಿ ರಾಜಕೀಯಕ್ಕಿಂತ ಮಿಗಿಲು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

Advertisement
Advertisement

ಚಂದ್ರವಳ್ಳಿ ನ್ಯೂಸ್, ನವದೆಹಲಿ:
"
ರಾಜ್ಯದ ಅಭಿವೃದ್ಧಿ ಹಾಗೂ ಕನ್ನಡಿಗರ ಹಿತಾಸಕ್ತಿಯ ವಿಷಯ ಬಂದಾಗ ಯಾವುದೇ ರಾಜಕೀಯವಿರಬಾರದು. ಪಕ್ಷ ಭೇದ ಮರೆತು ನಾವೆಲ್ಲರೂ ಒಗ್ಗಟ್ಟಿನಿಂದ ಒಂದೇ ಧ್ವನಿಯಾಗಬೇಕು," ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದ್ದಾರೆ.

​ನವದೆಹಲಿಯಲ್ಲಿ ಮಂಗಳವಾರ ನಡೆದ ಕರ್ನಾಟಕದ ಸಂಸದರ ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಳಿ ಬಾಕಿ ಇರುವ ರಾಜ್ಯದ ಹಲವು ಪ್ರಮುಖ ಯೋಜನೆಗಳಿಗೆ ಶೀಘ್ರ ಅನುಮೋದನೆ ದೊರಕಿಸಿಕೊಡಲು ಎಲ್ಲಾ ಸಂಸದರು ಸಾಥ್ ನೀಡಬೇಕೆಂದು ಮನವಿ ಮಾಡಿದರು.

​​ಬರಗಾಲದ ಆತಂಕ ಹಾಗೂ ಎಚ್ಚರಿಕೆ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ವೇಳೆ ರಾಜ್ಯದಲ್ಲಿ ಎದುರಾಗಬಹುದಾದ ಭೀಕರ ಬರಗಾಲದ ಕುರಿತು ಅವರು ಎಚ್ಚರಿಸಿದ್ದಾರೆ. ಆಲಮಟ್ಟಿ ಮತ್ತು ಹಾರಂಗಿ ಜಲಾಶಯಗಳನ್ನು ಹೊರತುಪಡಿಸಿ, ರಾಜ್ಯದ ಉಳಿದ ಬಹುತೇಕ ಜಲಾಶಯಗಳು ಬಾಲಂಗೋಲ ತಲುಪಿವೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಯಲು ಕೇಂದ್ರಕ್ಕೆ ತುರ್ತು ನೆರವು ಕೋರಿ ಪತ್ರ ಬರೆಯಲಾಗಿದೆ. ಜಲಾಶಯಗಳಲ್ಲಿರುವ ನೀರಿನ ಲಭ್ಯತೆ ನೋಡಿಕೊಂಡು ಬೆಳೆ ಬೆಳೆಯುವಂತೆ ಮತ್ತು ಜಾಗರೂಕತೆಯಿಂದ ನೀರು ಬಳಸುವಂತೆ ರೈತರಿಗೆ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

​ನವಲಿ ಬ್ಯಾಲೆನ್ಸಿಂಗ್ ಜಲಾಶಯ ನಿರ್ಮಾಣಕ್ಕೆ ಒಪ್ಪಿಗೆ:
ತುಂಗಭದ್ರಾ ಕ್ರಸ್ಟ್ ಗೇಟ್‌ಗಳ ಅಳವಡಿಕೆ ವೇಳೆ ಕೇಂದ್ರ ಜಲಶಕ್ತಿ ಸಚಿವರ ಸಮ್ಮುಖದಲ್ಲಿ ಆಂಧ್ರಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಸಿಎಂ ಎ. ರೇವಂತ್ ರೆಡ್ಡಿ ಅವರೊಂದಿಗೆ ಚರ್ಚಿಸಲಾಗಿದ್ದು, ೩೦ ಟಿಎಂಸಿ ನೀರು ಸಂಗ್ರಹಿಸಲು 'ನವಲಿ ಬ್ಯಾಲೆನ್ಸಿಂಗ್ ಜಲಾಶಯ' ನಿರ್ಮಿಸಲು ಮೂರೂ ರಾಜ್ಯಗಳ ಸಿಎಂಗಳು ಒಪ್ಪಿಗೆ ಸೂಚಿಸಿದ್ದಾರೆ.

ಇದಲ್ಲದೆ ಗೋದಾವರಿ, ಕೃಷ್ಣಾ, ಪೆನ್ನಾರ್ ಮತ್ತು ಕಾವೇರಿ ನದಿಗಳ ಜೋಡಣೆಗೂ ಸಹಮತಿ ವ್ಯಕ್ತವಾಗಿದೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್‌ಕೂಡ ಭೇಟಿಯಾಗಲು ಇಚ್ಛಿಸಿದ್ದಾರೆ.

​ಮೇಕೆದಾಟು ಯೋಜನೆಗೆ ಸುಪ್ರೀಂ ಆದೇಶದ ಬಲ:
ಮೇಕೆದಾಟು ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ರಾಜ್ಯಕ್ಕೆ ದೊಡ್ಡ ಬಲ ತಂದಿದೆ. ತಮ್ಮದೇ ಗಡಿಭಾಗದಲ್ಲಿ ಬ್ಯಾಲೆನ್ಸಿಂಗ್ ಜಲಾಶಯ ನಿರ್ಮಿಸಲು ಇತರ ರಾಜ್ಯಗಳ ಸಮ್ಮತಿ ಅಗತ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ವಿಚಾರವನ್ನು ಕೇಂದ್ರ ಜಲಶಕ್ತಿ ಸಚಿವರು ರಾಜ್ಯಸಭೆಯಲ್ಲೂ ಸ್ಪಷ್ಟಪಡಿಸಿದ್ದು, ಅವರಿಗೆ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

​ಕೃಷ್ಣಾ ಮತ್ತು ಮಹದಾಯಿ ಯೋಜನೆಗಳು:
ಕೃಷ್ಣಾ ನೀರು ವಿವಾದ ನ್ಯಾಯಾಧಿಕರಣದ ತೀರ್ಪಿನ ಅಧಿಸೂಚನೆಗೆ ಸಂಬಂಧಿಸಿದ ಪ್ರಕರಣದ ಶೀಘ್ರ ವಿಲೇವಾರಿಗೆ ಸುಪ್ರೀಂ ಕೋರ್ಟ್ 'ವಿಶೇಷ ಪೀಠ' ರಚಿಸಲು ತೀರ್ಮಾನಿಸಿದೆ. ಮಹದಾಯಿ ಯೋಜನೆಗೆ ಇರುವ ಕಾನೂನು ಅಡೆತಡೆಗಳನ್ನು ತೆರವುಗೊಳಿಸಲು ಹಿರಿಯ ವಕೀಲರೊಂದಿಗೆ ಶೀಘ್ರದಲ್ಲೇ ಮಾತುಕತೆ ನಡೆಸಲಾಗುವುದು.

​ದೆಹಲಿಯ ಕರ್ನಾಟಕ ಭವನದಲ್ಲಿ ವಿಶೇಷ ವ್ಯವಸ್ಥೆ:
ಕೇಂದ್ರದಲ್ಲಿ ಬಾಕಿ ಇರುವ ರಾಜ್ಯದ ಯೋಜನೆಗಳ ಮೇಲ್ವಿಚಾರಣೆ ನಡೆಸಲು ಹಾಗೂ ಅವುಗಳನ್ನು ತ್ವರಿತಗೊಳಿಸಲು ದೆಹಲಿಯ ಕರ್ನಾಟಕ ಭವನದಲ್ಲಿ ಹೊಸ ಸಾಂಸ್ಥಿಕ ವ್ಯವಸ್ಥೆ ರೂಪಿಸಲಾಗುತ್ತಿದೆ. ಪ್ರತ್ಯೇಕ 'ರೆಸಿಡೆಂಟ್ ಕಮಿಷನರ್' ನೇತೃತ್ವದಲ್ಲಿ ವಿಶೇಷ ತಂಡವೊಂದು ಈ ಕಾರ್ಯಗಳ ಪ್ರಗತಿಯನ್ನು ಸದಾ ವೀಕ್ಷಿಸಲಿದೆ.

​"ನಮ್ಮ ರಾಜ್ಯದ ಹಿತಾಸಕ್ತಿಯೇ ನಮಗೆ ಮೊದಲು. ಬನ್ನಿ, ನಾವೆಲ್ಲರೂ ಒಂದಾಗಿ ಕರ್ನಾಟಕವನ್ನು ಮುನ್ನಡೆಸೋಣ."
ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST