ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭವಿಷ್ಯದ ನೀರಿನ ಹಾಹಾಕಾರ ತಪ್ಪಿಸುವ ಹಾಗೂ ಅಂತರ್ಜಲ ಮಟ್ಟ ವೃದ್ಧಿಸುವ ಸದುದ್ದೇಶದಿಂದ ಹಿರಿಯೂರು ನಗರಸಭೆಯು ಮಹತ್ವದ 'ಮಳೆನೀರು ಸಂಗ್ರಹಣೆ ಅಭಿಯಾನ' ಹಮ್ಮಿಕೊಂಡಿದೆ.
ಪ್ರಧಾನಮಂತ್ರಿಗಳ 'ಮನ್ ಕೀ ಬಾತ್'ನ ೧೩೫ನೇ ಆವೃತ್ತಿಯ "ಜಲ ಸಂರಕ್ಷಣೆ ಅತ್ಯಗತ್ಯ" ಎಂಬ ಸಂದೇಶದಿಂದ ಪ್ರೇರಿತವಾಗಿರುವ ಈ ಅಭಿಯಾನದಲ್ಲಿ, ಮಳೆಯ ಪ್ರತಿಯೊಂದು ಹನಿಯನ್ನು ಉಳಿಸಲು ಸಾರ್ವಜನಿಕರು ಕೈಜೋಡಿಸಬೇಕೆಂದು ಜಿಲ್ಲಾಡಳಿತ ಹಾಗೂ ನಗರಸಭೆ ಮನವಿ ಮಾಡಿದೆ.

ಸಾರ್ವಜನಿಕರಿಗೆ ನಗರಸಭೆ ಮನವಿ:
ಮಳೆನೀರು ಕೊಯ್ಲು ಅಳವಡಿಕೆ: ಪ್ರತಿಯೊಂದು ಮನೆ, ವಸತಿ ಸಮುಚ್ಚಯ ಹಾಗೂ ಕಚೇರಿ/ಕಾರ್ಯಸ್ಥಳಗಳಲ್ಲಿ ಕಡ್ಡಾಯವಾಗಿ ಮಳೆನೀರು ಸಂಗ್ರಹಣಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು.
ಇಂಗುಗುಂಡಿ ಹಾಗೂ ಮರುಪೂರಣ: ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸೂಕ್ತ ಸ್ಥಳಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸುವುದು ಹಾಗೂ ಬಳಕೆಯಲ್ಲಿಲ್ಲದ/ಬತ್ತಿ ಹೋದ ಕೊಳವೆ ಬಾವಿಗಳನ್ನು ಜಲ ಮರುಪೂರಣಕ್ಕೆ ಬಳಸಿಕೊಳ್ಳುವುದು.
ಪಾರಂಪರಿಕ ಜಲಮೂಲಗಳ ಪುನರುಜ್ಜೀವನ: ನಮ್ಮ ಸುತ್ತಮುತ್ತಲಿನ ಬಾವಿಗಳು, ಕಲ್ಯಾಣಿಗಳು ಮತ್ತು ಇತರ ಸಾಂಪ್ರದಾಯಿಕ ಜಲಮೂಲಗಳನ್ನು ಸ್ವಚ್ಛಗೊಳಿಸಿ ಮರುಬಳಕೆಗೆ ಯೋಗ್ಯವಾಗುವಂತೆ ಮಾಡುವುದು.
ಹೂಳೆತ್ತುವ ಕಾರ್ಯ: ಕೆರೆ-ಕಲ್ಯಾಣಿಗಳು, ಹಳ್ಳ-ಕೊಳ್ಳಗಳು ಹಾಗೂ ಜಲಾಶಯಗಳ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ಅವುಗಳಲ್ಲಿ ತುಂಬಿರುವ ಹೂಳನ್ನು ತೆಗೆಯುವುದು.
ಹಸಿರೀಕರಣ: ಭೂಮಿಯು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ವ್ಯಾಪಕವಾಗಿ ಗಿಡ-ಮರಗಳನ್ನು ನೆಟ್ಟು ಹಸಿರನ್ನು ಬೆಳೆಸುವುದು.
"ಮಳೆಯ ಪ್ರತಿಯೊಂದು ಹನಿಯನ್ನು ಉಳಿಸೋಣ, ಭವಿಷ್ಯವನ್ನು ಸುರಕ್ಷಿತಗೊಳಿಸೋಣ" ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಈ ಅಭಿಯಾನದ ಬಗ್ಗೆ ತಾಂತ್ರಿಕ ನೆರವು ಅಥವಾ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಹಿರಿಯೂರು ನಗರಸಭೆಯ ತಾಂತ್ರಿಕ ಶಾಖೆಯನ್ನು ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತ ಎ.ವಾಸೀಂ ಹಾಗೂ ಆಡಳಿತಾಧಿಕಾರಿ ಮತ್ತು ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ತಮ್ಮ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



