ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಕೆಪಿಎಸ್‌ಸಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ವಿವಾದಕ್ಕೆ ರಾಹುಲ್ ಗಾಂಧಿ ಅವರನ್ನೂ ಎಳೆದು ತಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಹುದ್ದೆಗಳ ಅಭ್ಯರ್ಥಿಗಳನ್ನು ರೆಸಾರ್ಟ್‌ನಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಈ ವಿಷಯದಲ್ಲಿ ಆಗಿನ ಇಲಾಖಾ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ರಾಹುಲ್ ಗಾಂಧಿಗೆ ಪ್ರಶ್ನೆ: "ಕೆಪಿಎಸ್ ಸಿ ಅಕ್ರಮದಿಂದ ಸಂತ್ರಸ್ತರಾದ ಅಭ್ಯರ್ಥಿಗಳನ್ನು ಭೇಟಿಯಾಗಲು ರಾಹುಲ್ ಗಾಂಧಿ ಅವರು ಯಾವಾಗ ಬೆಂಗಳೂರಿಗೆ ಬರುತ್ತಾರೆ?" ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ರೆಸಾರ್ಟ್‌ನಲ್ಲಿ ಪರೀಕ್ಷೆ: ದೇಶದಲ್ಲೇ ಮೊದಲ ಬಾರಿಗೆ ಶಾಲಾ-ಕಾಲೇಜುಗಳ ಬದಲಿಗೆ ರೆಸಾರ್ಟ್‌ನಲ್ಲಿ ಅಭ್ಯರ್ಥಿಗಳನ್ನು ಇರಿಸಿ, ಹಣ ನೀಡಿದವರಿಗೆ ಮುಂಚಿತವಾಗಿಯೇ ಪ್ರಶ್ನೆ ಪತ್ರಿಕೆ ನೀಡಿ ಉತ್ತರ ಬರೆಸಲಾಗಿದೆ.
ತನಿಖಾ ವರದಿ ಮತ್ತು ನಿರ್ಲಕ್ಷ್ಯ: ಪರೀಕ್ಷಾ ಅಕ್ರಮದ ಬಗ್ಗೆ ಐವರು ಸದಸ್ಯರ ಸಮಿತಿ 40 ಸಭೆಗಳನ್ನು ನಡೆಸಿ ಅಕ್ರಮವನ್ನು ದೃಢಪಡಿಸಿ ವರದಿ ನೀಡಿತ್ತು. ಕೆಪಿಎಸ್‌ಸಿ ಅಧ್ಯಕ್ಷರು ಆಕ್ಷೇಪಿಸಿ ಪತ್ರ ಬರೆದಿದ್ದರೂ, ಅದನ್ನು ಬದಿಗೊತ್ತಿ ಧಾವಂತದಲ್ಲಿ ಷರತ್ತುಬದ್ಧ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ.
ಇ.ಡಿ ತನಿಖೆ ಮತ್ತು ಹೆದರಿಕೆ: ಜಾರಿ ನಿರ್ದೇಶನಾಲಯ (ED) ರಂಗಪ್ರವೇಶ ಮಾಡುತ್ತಿದ್ದಂತೆ ಸಚಿವರಿಗೆ ಭಯ ಶುರುವಾಗಿದೆ. ಇದು ಅಮಿತ್ ಶಾ ಮಾಡಿಸಿದ ತನಿಖೆಯಲ್ಲ, ಬದಲಿಗೆ ಸರ್ಕಾರದ ಭ್ರಷ್ಟಾಚಾರವೇ ಇ.ಡಿ ತನಿಖೆಗೆ ಕಾರಣ.
ಅಧಿಕಾರಿಯ ಸಿನಿಮೀಯ ಡ್ರಾಮಾ: ಪರೀಕ್ಷಾ ನಿಯಂತ್ರಣ ಅಧಿಕಾರಿ ದಿಢೀರ್ ನಾಪತ್ತೆಯಾಗಿ ದೆಹಲಿ, ಚೆನ್ನೈ ಹಾಗೂ ದೇವನಹಳ್ಳಿಯ ರೆಸಾರ್ಟ್‌ಗಳಿಗೆ ಅಲೆದಾಡಿದ್ದು ಸಿನಿಮೀಯ ಕಥೆಯಂತಿದೆ. ಈ ಅಧಿಕಾರಿಯ ಹಿಂದೆ ಪ್ರಭಾವಿಗಳ ಕೈವಾಡವಿದೆ.
ಶ್ಯಾಮ್ ಭಟ್ ನೇಮಕಕ್ಕೆ ಆಕ್ಷೇಪ: ಬಿಡಿಎನಲ್ಲಿ 'ರೀಡೂ' ಪ್ರಕರಣದಲ್ಲಿದ್ದ ಶ್ಯಾಮ್ ಭಟ್ ಅವರನ್ನು 2016-17ರಲ್ಲಿ ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಮಾಡಿದ್ದು ಏಕೆ ಮತ್ತು ಈಗ ಕೆಲಸ ಪಡೆದಿರುವ 24 ಮಂದಿ ಯಾರ ಸಂಬಂಧಿಕರು ಎಂಬುದನ್ನು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಬೇಕು.
ಇಲಾಖೆಯಲ್ಲಿ ನಡೆದ ಅಕ್ರಮದ ಬಗ್ಗೆ ಮಾಹಿತಿ ಇಲ್ಲ ಎನ್ನಲು ಸಚಿವರಿಗೆ ಅತೀ ಜಾಣತನದ ಅಗತ್ಯವಿಲ್ಲ. ಸಚಿವರ ಮಾತುಗಳಲ್ಲಿ ಪ್ರಾಮಾಣಿಕತೆ ಕಾಣಿಸುತ್ತಿಲ್ಲ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.




