ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಶೀಘ್ರ ಅನುಮೋದನೆ ಪಡೆದುಕೊಳ್ಳಲು ಕರ್ನಾಟಕ ಸರ್ಕಾರ ತನ್ನ ಪ್ರಯತ್ನಗಳನ್ನು ಚುರುಕುಗೊಳಿಸಿದೆ.
ರಾಜ್ಯ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಬುಧವಾರ ನವದೆಹಲಿಯಲ್ಲಿ ಕೇಂದ್ರ ಜಲ ಆಯೋಗದ (CWC) ಅಧ್ಯಕ್ಷ ರಾಮ್ ಪ್ರಸಾದ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.
ಅನುಸರಣೆ ವರದಿ ಚರ್ಚೆ: ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ ಕುರಿತು ಈ ಹಿಂದೆ CWC ಎತ್ತಿದ್ದ ತಾಂತ್ರಿಕ ಆಕ್ಷೇಪಣೆಗಳಿಗೆ ಪ್ರತಿಯಾಗಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಸಮಗ್ರ ಅನುಸರಣೆ ವರದಿಯ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.
ಸ್ಥಳ ಪರಿಶೀಲನೆಯ ವಿವರ: ಇತ್ತೀಚೆಗೆ CWC ಸದಸ್ಯ ಯೋಗೇಶ್ ಪೈತಂಕರ್ ಅವರು ಮೇಕೆದಾಟು ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಗಮನಕ್ಕೆ ಬಂದ ವಾಸ್ತವಿಕ ಭೌಗೋಳಿಕ ಪರಿಸ್ಥಿತಿ ಹಾಗೂ ತಾಂತ್ರಿಕ ಸವಾಲುಗಳ ಬಗ್ಗೆ ರಾಜ್ಯ ನಿಯೋಗವು ಮಾಹಿತಿ ಹಂಚಿಕೊಂಡಿತು.
ಶೀಘ್ರ ಕ್ಲಿಯರೆನ್ಸ್‌ಗೆ ಮನವಿ: ಯೋಜನೆಯ ತಾಂತ್ರಿಕ ಪರಿಶೀಲನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಅಗತ್ಯ ತಾಂತ್ರಿಕ ಸಹಕಾರ ನೀಡುವಂತೆ ಸಚಿವರು CWC ಗೆ ಮನವಿ ಮಾಡಿದರು. ಪರಿಶೀಲನೆಗೆ ಹೆಚ್ಚುವರಿ ಸ್ಪಷ್ಟೀಕರಣ ಬೇಕಿದ್ದಲ್ಲಿ ಇಲಾಖೆಯು ತಕ್ಷಣವೇ ಒದಗಿಸಲಿದೆ ಎಂದು ಭರವಸೆ ನೀಡಿದರು.
ಬೆಂಗಳೂರಿನ ಕುಡಿಯುವ ನೀರಿನ ಅಗತ್ಯ: ರಾಜಧಾನಿ ಬೆಂಗಳೂರು ಹಾಗೂ ನೆರೆಯ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ನೀರಿನ ಬೇಡಿಕೆ ಮತ್ತು ಮಳೆಯಲ್ಲಿನ ಏರಿಳಿತದ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆ ಅತ್ಯಗತ್ಯ. ಇದು ಕುಡಿಯುವ ನೀರು ಪೂರೈಕೆ ಮಾತ್ರವಲ್ಲದೆ ಜಲವಿದ್ಯುತ್ ಉತ್ಪಾದನೆ ಮತ್ತು ಮಳೆ ಕೊರತೆಯ ವರ್ಷಗಳಲ್ಲೂ ಕೆಳಹರಿವಿಗೆ ನಿಯಂತ್ರಿತ ನೀರು ಹರಿಸಲು ನೆರವಾಗಲಿದೆ ಎಂದು ಸಚಿವರು ವಿವರಿಸಿದರು.
ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹಾಗೂ ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ ಸೇರಿದಂತೆ ಹಿರಿಯ ಅಧಿಕಾರಿಗಳು ಈ ನಿಯೋಗದಲ್ಲಿದ್ದರು.
ಹಿನ್ನೆಲೆ- ಏನಿದು ಮೇಕೆದಾಟು ಯೋಜನೆ?
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದ ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕಾಗಿ ಕರ್ನಾಟಕ ಸರ್ಕಾರ ಈ ಬಹುಉದ್ದೇಶಿತ ಯೋಜನೆಯನ್ನು ಪ್ರಪೋಸ್ ಮಾಡಿದೆ. ಆದರೆ, ಈ ಅಣೆಕಟ್ಟು ನಿರ್ಮಾಣದಿಂದ ತಮಗೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಬಹುದು ಎಂಬ ಆತಂಕದಿಂದ ನೆರೆಯ ತಮಿಳುನಾಡು ಸರ್ಕಾರ ಯೋಜನೆಯನ್ನು ಸತತವಾಗಿ ವಿರೋಧಿಸುತ್ತಾ ಬಂದಿದೆ.




