ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸರ್ಕಾರದ E20 (ಶೇ. 20 ಎಥನಾಲ್ ಮಿಶ್ರಿತ) ಇಂಧನ ನೀತಿಯ ಸುತ್ತ ಸೃಷ್ಟಿಯಾಗಿರುವ ಗೊಂದಲಗಳು, ವೈಪರೀತ್ಯಗಳು ಹಾಗೂ ತಾಂತ್ರಿಕ ಹಿನ್ನಡೆಗಳ ಕುರಿತು ಕರ್ನಾಟಕ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಕೇಂದ್ರದ ಪ್ರಮುಖ ನಾಯಕರ ವಿರುದ್ಧ ಸರಣಿ ಪ್ರಶ್ನೆಗಳನ್ನು ಎತ್ತಿದ್ದಾರೆ.
E20 ಇಂಧನದಿಂದ ವಾಹನಗಳ ಎಂಜಿನ್ ಭಾಗಗಳಲ್ಲಿ ತುಕ್ಕು ಹಿಡಿಯುವುದು, ತೇವಾಂಶ ಮತ್ತು ಕಾರ್ಯಕ್ಷಮತೆ ಕುಸಿಯುವ ಕುರಿತು ಸಿಯಾಮ್ (SIAM) ಸಂಸ್ಥೆಯು ಸರ್ಕಾರಕ್ಕೆ ಪತ್ರ ಬರೆದು, ತಕ್ಷಣವೇ ಅದನ್ನು ಹಿಂಪಡೆದಿರುವುದನ್ನು ಖರ್ಗೆ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಶೇ. 20 ಎಥನಾಲ್ ಮಿಶ್ರಣವು ಒಂದು "ಪ್ರಯೋಗ" ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅಟಾರ್ನಿ ಜನರಲ್ ನೀಡಿರುವ ಹೇಳಿಕೆಯನ್ನೂ ಬೆಟ್ಟು ಮಾಡಿದ್ದಾರೆ.
ಪ್ರಿಯಾಂಕ್ ಖರ್ಗೆ ಎತ್ತಿರುವ ಪ್ರಮುಖ ಅಂಶಗಳು:
ಆಟೋಮೊಬೈಲ್ ರಂಗದ ಗೊಂದಲ: SIAM ಸಂಸ್ಥೆಯು ಇಂಧನದ ಗುಣಮಟ್ಟ ಹಾಗೂ ಎಂಜಿನ್ ಹಾನಿಯ ಬಗ್ಗೆ ಪತ್ರ ಬರೆದು, ರಾತ್ರೋರಾತ್ರಿ ಹಿಂಪಡೆದು ಸ್ಪಷ್ಟನೆ ನೀಡಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಸಾರ್ವಜನಿಕರ ಸಂಕಷ್ಟ: ದೇಶಾದ್ಯಂತ ವಾಹನ ಸವಾರರು ಎಂಜಿನ್ ಹಾನಿ ಮತ್ತು ಮೈಲೇಜ್ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದರೂ ಪೆಟ್ರೋಲಿಯಂ ಸಚಿವಾಲಯ ಇದನ್ನು ನಿರಾಕರಿಸುತ್ತಿದೆ.
ನಾಯಕರ ವೈರುಧ್ಯ ಹೇಳಿಕೆಗಳು: ನಿತಿನ್ ಗಡ್ಕರಿ ಅವರು E20 ಪೆಟ್ರೋಲಿಯಂ ಸಚಿವಾಲಯಕ್ಕೆ ಸೇರಿದ್ದು ಎಂದರೂ, ಶೇ. 100 ಎಥನಾಲ್ (E100) ಬಳಕೆಗೂ ನಿಯಮಾವಳಿಗಳಿಗೆ ಸಹಿ ಹಾಕುವುದಾಗಿ ಹೇಳುತ್ತಿದ್ದಾರೆ.
ಸಾಮಾಜಿಕ ಜಾಲತಾಣ ನಿಯಂತ್ರಣ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಸಂಬಂಧಿಸಿದಂತೆ ಇಂಧನ ನೀತಿ ಲಿಂಕ್ ಮಾಡಿ ಹಾಕಲಾದ ಪೋಸ್ಟ್‌ಗಳನ್ನು ತೆರವುಗೊಳಿಸಲು ಬೊಂಬಾಯಿ ಹೈಕೋರ್ಟ್ ನಿರ್ದೇಶನ ನೀಡಿರುವುದನ್ನೂ ಅವರು ಪ್ರಸ್ತಾಪಿಸಿದ್ದಾರೆ.
E20 ಇಂಧನವು ಸಂಪೂರ್ಣ ಸುರಕ್ಷಿತವಾಗಿದ್ದರೆ ಈ ರೀತಿಯ ಹಿಂದೇಟು, ಪರಸ್ಪರ ವಿರೋಧಿ ಹೇಳಿಕೆಗಳು ಮತ್ತು ಸತ್ಯ ಮುಚ್ಚಿಡುವ ಪ್ರಯತ್ನಗಳು ಏಕೆ ನಡೆಯುತ್ತಿವೆ ಎಂದು ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ, "ಪ್ರಧಾನಿ ಮೋದಿ, ನಿತಿನ್ ಗಡ್ಕರಿ ಹಾಗೂ ಹರ್ದೀಪ್ ಸಿಂಗ್ ಪುರಿ ಅವರು ದೇಶದ ಜನರಿಂದ ಏನನ್ನು ಮುಚ್ಚಿಡುತ್ತಿದ್ದಾರೆ?" ಎಂದು ನೆಟ್‌ನಲ್ಲಿ ನೇರ ವಾಗ್ದಾಳಿ ನಡೆಸಿದ್ದಾರೆ.



