ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ ನಡೆದ ಪ್ರಜಾಸೇವಾ ಆಂದೋಲನಾ ಸಭೆಗಳಲ್ಲಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ಹೆಚ್ಚಿನ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಆದರೆ ಕೇವಲ ಅರ್ಜಿ ವಿಲೇವಾರಿಯಷ್ಟೇ ಅಲ್ಲದೆ, ಸಾರ್ವಜನಿಕರ ಸಮಸ್ಯೆಗಳಿಗೆ ನಿಜವಾದ ಪರಿಹಾರ ಸಿಗಬೇಕು ಹಾಗೂ ಕಾನೂನು ತೊಡಕುಗಳಿರುವ ಪ್ರಕರಣಗಳ ಹೊರತುಪಡಿಸಿ ಉಳಿದ ಕೆಲಸಗಳು ಕಾಲಮಿತಿಯಲ್ಲಿ ಆಗಬೇಕು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹೊಸದುರ್ಗ ತಾಲ್ಲೂಕು ಆಡಳಿತದ ವತಿಯಿಂದ ಹೊಸದುರ್ಗ ಪಟ್ಟಣದ ಅಶೋಕ ರಂಗಮಂದಿರದಲ್ಲಿ ಆಯೋಜಿಸಲಾದ ‘ಪ್ರಜಾಸೇವಾ ಆಂದೋಲನ' ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಶಾಸಕರು ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಇದುವರೆಗೂ ನಡೆದ ಪ್ರಜಾಸೇವಾ ಆಂದೋಲನದಲ್ಲಿ, ಸಾರ್ವಜನಿಕರಿಂದ ಸುಮಾರು 770 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 759 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಹಿರಿಯೂರು ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರಜಾಸೇವಾ ಆಂದೋಲನದಲ್ಲಿ, ಹಿರಿಯೂರಿಗೆ ಸಂಬಂಧಿಸಿದಂತೆ ಒಟ್ಟು 287 ಅರ್ಜಿಗಳು ಬಂದಿದ್ದು, ಅದರಲ್ಲಿ 282 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ಹೊಳಲ್ಕೆರೆ ತಾಲ್ಲೂಕಿನಲ್ಲಿ ಒಟ್ಟು 66 ಅರ್ಜಿಗಳು ಸಲ್ಲಿಕೆಯಾಗಿದ್ದು, 64 ಅರ್ಜಿಗಳನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ. ಇನ್ನೂ ಮುಂದುವರೆದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕೆಡಿಪಿ ಸಭೆಗಳಲ್ಲಿ ಈ ಅರ್ಜಿಗಳ ವಿಲೇವಾರಿ ಕುರಿತು ವಿಸ್ತೃತವಾಗಿ ಚರ್ಚಿಸಲಾಗುವುದು ಎಂದರು.
ಸಿದ್ದರಾಮಯ್ಯರವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಯಿತು. ಅಧಿಕಾರ ಹಸ್ತಾಂತರಿಸಿದ ಬಳಿಕ ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಂಡು ‘ಪ್ರಜಾಸೇವಾ ಆಂದೋಲನ’ ಎಂಬ ವಿಶೇಷ ಕಾರ್ಯಕ್ರಮ ರೂಪಿಸಿದ್ದಾರೆ. ಈ ಖಾತೆಯನ್ನು ಸ್ವತಃ ಮುಖ್ಯಮಂತ್ರಿಗಳೇ ನಿರ್ವಹಿಸುತ್ತಿದ್ದಾರೆ. ಹಿಂದೆ ಜನಸ್ಪಂದನ ಸಭೆಗಳು ಕೇವಲ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದವು, ಆದರೆ ಈಗ ಈ ಕಾರ್ಯಕ್ರಮ ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ತಾಲ್ಲೂಕು ಮಟ್ಟದಿಂದ ಹಿಡಿದು ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ಇದರ ನಿರ್ವಹಣೆ ನಡೆಯಲಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದರು.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಲಾಗುತ್ತಿದ್ದು, ಇದರೊಂದಿಗೆ ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ, ಹಾಗೂ ನಗರಗಳಲ್ಲಿ ‘ಭಾರತ್ ಜೋಡೋ ಯುವ ಸಂಘ'ಗಳನ್ನು ಸ್ಥಾಪಿಸಿ, ಪ್ರತಿಯೊಂದು ಸಂಘಕ್ಕೂ ರೂ.10 ಲಕ್ಷ ರೂಪಾಯಿಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ‘ನೇಗಿಲಯೋಗಿ', ‘ತೇಗದ ಸಿರಿ' ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಬರಗಾಲ ಬಂದಂತಹ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ತೋಟಗಾರಿಕೆ, ಕೃಷಿ ಹಾಗೂ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದು, ಬಿತ್ತನೆ ಮಾಡದವರಿಗೂ ಸಹ ಇನ್ಸುರೆನ್ಸ್ ದೊರೆಯಲಿದೆ. ಇದಕ್ಕಾಗಿ ಪ್ರತ್ಯೇಕವಾಗಿ ಸುಮಾರು 207 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಭದ್ರಾ ಜಲಾಶಯದಿಂದ ನೀರು ಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ವರ್ಷವೂ 29.9 ಟಿಎಂಸಿ ನೀರನ್ನು ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗುವುದು. ತಾಲ್ಲೂಕಿನ ಜನತೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ನೀರಾವರಿ ವ್ಯವಸ್ಥೆ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಇದು ಶಾಶ್ವತವಾದ ವ್ಯವಸ್ಥೆಯಾಗಿದ್ದು, ಮೋಟಾರ್ ಅಥವಾ ಕ್ಯಾನಲ್ ಮೂಲಕ ನೀರು ಪಡೆಯುವ ಯೋಜನೆಗೆ ಯಾವುದೇ ರೀತಿಯ ಹಾನಿ ಉಂಟು ಮಾಡಬಾರದು ಎಂದು ಎಚ್ಚರಿಸಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರದ ಹೊಸ ಹೆಜ್ಜೆ - ಶಾಸಕ ಬಿ.ಜಿ.ಗೋವಿಂದಪ್ಪ: ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಿ.ಜಿ.ಗೋವಿಂದಪ್ಪ ಅವರು, ಸಾರ್ವಜನಿಕರ ಸಮಸ್ಯೆಗಳತ್ವರವಾದ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ರಘುಮೂರ್ತಿ ಅವರ ಮಾರ್ಗದರ್ಶನದಲ್ಲಿ ಪ್ರಜಾಸೇವಾ ಆಂದೋಲನ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಾರ್ವಜನಿಕರು ಖಾತೆ ಬದಲಾವಣೆ, ನಿವೇಶನ, ಹಕ್ಕುಪತ್ರಗಳು, ಪಿಂಚಣಿ ಅಥವಾ ಇತರೆ ಆಡಳಿತಾತ್ಮಕ ಕೆಲಸಗಳು ಇವುಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಎಲ್ಲಾ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಉಪಸ್ಥಿತರಿದ್ದು, ಅರ್ಜಿಗಳನ್ನು ಪಡೆದುಕೊಂಡು, ಅವುಗಳಿಗೆ ಶೀಘ್ರದಲ್ಲೇ ಪರಿಹಾರ ಒದಗಿಸಲಿದ್ದಾರೆ.
ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಯಾ ಕ್ಷೇತ್ರದ ಶಾಸಕರು ಪ್ರತಿ ಶನಿವಾರ ತಾಲ್ಲೂಕು ಮಟ್ಟದಲ್ಲಿ ಇಂತಹ ಜನಪರ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ನಡೆಸಬೇಕೆಂಬ ಕಟ್ಟುನಿಟ್ಟಿನ ಆದೇಶವಿದೆ. ಸಾರ್ವಜನಿಕರಿಂದ ಸ್ವೀಕರಿಸಲಾದ ಯಾವುದೇ ಅರ್ಜಿಯನ್ನು ಬಾಕಿ ಉಳಿಸಿಕೊಳ್ಳದೆ, ನಿಗದಿತ ಸಮಯದಲ್ಲಿ ಸೂಕ್ತ ಉತ್ತರ ಹಾಗೂ ಪರಿಹಾರವನ್ನು ಅರ್ಜಿದಾರರಿಗೆ ತಲುಪಿಸುವ ಜವಾಬ್ದಾರಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ವಹಿಸಲಾಗಿದೆ. ಈ ಕಾರ್ಯಕ್ರಮದ ಪ್ರಗತಿ ಮತ್ತು ಯಶಸ್ಸನ್ನು ಸ್ವತಃ ಮುಖ್ಯಮಂತ್ರಿಗಳೇ ಖುದ್ದಾಗಿ ಪರಿಶೀಲಿಸುತ್ತಿದ್ದಾರೆ ಎಂದರು.
ಗಡಿ ಅಹಮ್ಮದ್ ನಗರದಲ್ಲಿ ಸರ್ಕಾರಿ ಜಮೀನುಗಳಲ್ಲಿ ಕೆಲವರು ಅನಧಿಕೃತವಾಗಿ ಬೇಲಿ ಹಾಕಿ, ಶಾಲೆಗೆ ಹೋಗುವ ಮಕ್ಕಳು ಮತ್ತು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ತಹಶೀಲ್ದಾರರು ಅಂತಹ ಜಮೀನುಗಳನ್ನು ಪರಿಶೀಲಿಸಿ, ಅನಧಿಕೃತವಾಗಿ ಬೇಲಿಯನ್ನು ತೆರವುಗೊಳಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಈ ವೇಳೆ ಸೂಚಿಸಿದರು.
ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಥಳದಲ್ಲೇ ಪರಿಹಾರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಎಸ್.ಆಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಜಾಸೇವಾ ಆಂದೋಲನ' ಸಭೆಯು ಸಾರ್ವಜನಿಕರಿಂದ ಅರ್ಜಿ ಹಾಗೂ ಅಹವಾಲುಗಳನ್ನು ಸ್ವೀಕರಿಸಿ, ಅವುಗಳಿಗೆ ಸೂಕ್ತ ಸ್ಪಂದನೆ ನೀಡುವ ಸತ್ಕಾರ್ಯವಾಗಿದೆ. ಇದುವರೆಗೆ ಎರಡು ತಾಲ್ಲೂಕುಗಳಲ್ಲಿ ಯಶಸ್ವಿಯಾಗಿ ಸಭೆಗಳನ್ನು ನಡೆಸಲಾಗಿದ್ದು, ಹೊಸದುರ್ಗ ತಾಲ್ಲೂಕಿನಲ್ಲಿ ಮೂರನೇ ಸಭೆಯನ್ನು ಆಯೋಜಿಸಲಾಗಿದೆ. ಸಾರ್ವಜನಿಕರ ಕುಂದುಕೊರತೆಗಳು ಹಾಗೂ ಮನವಿಗಳಿಗೆ ತಕ್ಷಣ ಸ್ಪಂದಿಸಲು ಸಂಬಂಧಪಟ್ಟ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದಾರೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ರಮ್ಯಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ್, ಜಿ.ಪಂ ಉಪ ಕಾರ್ಯದರ್ಶಿ ಬಾಬು, ತಹಶೀಲ್ದಾರ್ ತಿರುಪತಿ ಪಾಟೀಲ್, ತಾ.ಪಂ ಇಓ ಸುನೀಲ್ ಕುಮಾರ್, ಜಿಲ್ಲಾ ಕೆ.ಡಿ.ಪಿ ಸಮಿತಿ ಸದಸ್ಯೆ ದೀಪಿಕಾ ಸತೀಶ್, ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟಗಾರರ ಸೊಸೈಟಿ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಮುಖಂಡರಾದ ಆಗ್ರೋ ಶಿವಣ್ಣ, ಲೋಕೇಶ್ವರಪ್ಪ, ರಾಜಣ್ಣ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೃಷಿ, ತೋಟಗಾರಿಕೆ, ಆರೋಗ್ಯ, ಅರಣ್ಯ, ಪಶು ಸೇವಾ ಹಾಗೂ ಪಶು ವೈದ್ಯಕೀಯ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪಟ್ಟಣ ಪಂಚಾಯಿತಿ ಸೇರಿದಂತೆ ವಿವಿದ ಇಲಾಖೆಗಳ ವಸ್ತು ಪ್ರದರ್ಶನ ಮಳಿಗೆಗಳನ್ನು ಸಚಿವ ಟಿ.ರಘುಮೂರ್ತಿ ಉದ್ಘಾಟಿಸಿದರು. ಇದೇ ವೇಳೆ ಹೊಸದುರ್ಗ ಹಾಗೂ ಇತರ ಪಟ್ಟಣದ ಪ್ರದೇಶಗಳಲ್ಲಿ ಈಗಾಗಲೇ ಮನೆಗಳನ್ನು ಕಟ್ಟಿಕೊಂಡಿದ್ದು, ಇವರಿಗೆ ಜಾಗದ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತರ್ಜಾತಿ ವಿವಾಹವಾದ ಜೋಡಿಗಳಿಗೆ ಪ್ರೋತ್ಸಾಹ ಧನ ಮಂಜೂರಾಗಿದ್ದು, ಎಫ್.ಡಿ.ಬಾಂಡ್ ವಿತರಿಸಲಾಯಿತು.




