ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ ಶಿವಕುಮಾರ್ ಹಾಗೂ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಜಂಟಿಯಾಗಿ ನವದೆಹಲಿಗೆ ಪಯಣ ಬೆಳೆಸಿದ್ದಾರೆ.
ಜೂನ್ 3 ರಂದು ನಡೆಯಲಿರುವ ಐತಿಹಾಸಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ, ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡಿ ನೂತನ ಸಚಿವ ಸಂಪುಟದ ಪಟ್ಟಿಯನ್ನು ಅಂತಿಮಗೊಳಿಸುವುದು ಈ ಇಬ್ಬರು ನಾಯಕರ ದಿಢೀರ್ ದೆಹಲಿ ಭೇಟಿಯ ಮುಖ್ಯ ಉದ್ದೇಶವಾಗಿದೆ.
ಜೂನ್ 3 ಕ್ಕೆ ರಾಜಕೀಯ ಮಹೂರ್ತ:
ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್, "ನಾನು ಮತ್ತು ಸಿದ್ದರಾಮಯ್ಯ ಇಬ್ಬರೂ ಒಟ್ಟಿಗೆ ದೆಹಲಿಗೆ ಹೋಗುತ್ತಿದ್ದೇವೆ" ಎಂದಷ್ಟೇ ಹೇಳಿ ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.
ಶನಿವಾರವಷ್ಟೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಅಧಿಕೃತವಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಅವರು, ಜೂನ್ 3 ರಂದು ಸಂಜೆ 4:05 ಕ್ಕೆ ಲೋಕ ಭವನದ ಆವರಣದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರೊಂದಿಗೆ ಮೊದಲ ಹಂತದಲ್ಲಿ ಕೆಲವು ಪ್ರಮುಖ ಸಚಿವರೂ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೈಕಮಾಂಡ್ ಅಂಗಳದಲ್ಲಿ ಸಚಿವ ಸಂಪುಟ ಕಸರತ್ತು:
ಸದ್ಯ ಕೈಯಲ್ಲಿರುವುದು ಸೀಮಿತ ಸಚಿವ ಸ್ಥಾನಗಳು, ಆದರೆ ಆಕಾಂಕ್ಷಿಗಳ ಪಟ್ಟಿ ಮಾತ್ರ ಬೆಟ್ಟದಷ್ಟಿದೆ. ಹೀಗಾಗಿ ಯಾರನ್ನು ಕೈಬಿಟ್ಟರೂ ಬಂಡಾಯದ ಭೀತಿ ಎದುರಾಗಲಿದ್ದು, ನಿಯೋಜಿತ ಸಿಎಂ ಡಿಕೆಶಿಗೆ ಸಂಪುಟ ರಚನೆ ಕತ್ತಿಯ ಮೇಲಿನ ನಡಿಗೆಯಾಗಿದೆ.
ಸಮತೋಲನದ ಸೂತ್ರ: ಹೊಸ ಸಂಪುಟದಲ್ಲಿ ಹಳಬರ ಅನುಭವ ಮತ್ತು ಹೊಸಬರ ಉತ್ಸಾಹ ಎರಡನ್ನೂ ಸಮ್ಮಿಲನಗೊಳಿಸಲು ಹೈಕಮಾಂಡ್ ಚಿಂತಿಸಿದೆ. ಜಾತಿ ಸಮೀಕರಣ, ಪ್ರಾದೇಶಿಕ ಪ್ರಾತಿನಿಧ್ಯ ಹಾಗೂ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರ ನಿಷ್ಠಾವಂತರಿಗೂ ಸಮಾನ ಅವಕಾಶ ಕಲ್ಪಿಸುವ ಮೂಲಕ ಸಮತೋಲನ ಸಾಧಿಸಲು ತಂತ್ರ ರೂಪಿಸಲಾಗುತ್ತಿದೆ.
ಉಪಮುಖ್ಯಮಂತ್ರಿ ಹುದ್ದೆಗಳ ಲೆಕ್ಕಾಚಾರ: ಸಿದ್ದರಾಮಯ್ಯ ಅವರ ನಿಕಟವರ್ತಿಗಳ ವಲಯದಿಂದ ಹಲವರಿಗೆ ಉಪಮುಖ್ಯಮಂತ್ರಿ ಹುದ್ದೆ ಸಿಗಬಹುದು ಹಾಗೂ ನಿರ್ಗಮಿತ ಸಂಪುಟದ ಕೆಲವು ಸಚಿವರಿಗೆ ಈ ಬಾರಿ ಕೊಕ್ ನೀಡಲಾಗುವುದು ಎಂಬ ಊಹಾಪೋಹಗಳು ದಟ್ಟವಾಗಿವೆ.
ಡಿಕೆಶಿ ಪ್ರತಿಕ್ರಿಯೆ: ಮೊದಲ ದಿನ ಎಷ್ಟು ಜನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಡಿಕೆಶಿ, "ಅದೆಲ್ಲವೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು, ನಾನು ಈ ಬಗ್ಗೆ ಈಗಲೇ ಏನೂ ಹೇಳಲ್ಲ" ಎಂದು ಭಾನುವಾರ ಸ್ಪಷ್ಟಪಡಿಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಅಧಿಕೃತ ಪ್ರಸ್ತಾವನೆಗಳು ಇನ್ನೂ ಚರ್ಚೆಯ ಹಂತದಲ್ಲೇ ಇವೆ ಎಂದಿದ್ದಾರೆ.
ದೆಹಲಿಗೆ ಶಿಫ್ಟ್ ಆದ 'ಲಾಬಿ'; ಕೆಪಿಸಿಸಿ ಅಧ್ಯಕ್ಷ ಗಾದಿಗೆ ಪೈಪೋಟಿ
ರಾಜ್ಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಲಾಬಿ ತೀವ್ರಗೊಂಡಿದ್ದು, ನಾಯಕರು ದೆಹಲಿ ವಿಮಾನ ಹತ್ತುತ್ತಿದ್ದಾರೆ. ನಿರ್ಗಮಿತ ಸಂಪುಟದಲ್ಲಿದ್ದ ಸಚಿವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಹೊಸ ಶಾಸಕರು ಹೈಕಮಾಂಡ್ ಮುಖಂಡರ ಮನೆ ಬಾಗಿಲು ತಟ್ಟುತ್ತಿದ್ದಾರೆ.
ಮತ್ತೊಂದೆಡೆ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿರುವುದರಿಂದ ಅವರು ಸದ್ಯ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಹುದ್ದೆ ಯಾರಿಗೆ ಸಿಗಲಿದೆ ಎಂಬ ಚರ್ಚೆಯೂ ಆರಂಭವಾಗಿದೆ. ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದು, ಅವರು ಅಧ್ಯಕ್ಷ ಗಾದಿಯ ಜೊತೆಗೆ ಪ್ರಭಾವಿ ಸಚಿವ ಸ್ಥಾನದ ಮೇಲೂ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಡಿಕೆಶಿ ನಿವಾಸದ ಮುಂದೆ ಅಭಿಮಾನಿಗಳ ಸಾಗರ:
ದೆಹಲಿಗೆ ತೆರಳುವ ಮುನ್ನ ಇಂದು ಬೆಳಗ್ಗೆ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಅವರ ಬೆಂಗಳೂರಿನ ನಿವಾಸದ ಮುಂದೆ ಅಭಿಮಾನಿಗಳು ಮತ್ತು ಬೆಂಬಲಿಗರ ದಂಡೇ ನೆರೆದಿತ್ತು. ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಹಿತೈಷಿಗಳನ್ನು ಕಂಡ ಡಿಕೆಶಿ, ತಮ್ಮ ನಿವಾಸದ ಬಾಲ್ಕನಿಯಿಂದಲೇ ಕೈಬೀಸಿ ಎಲ್ಲರ ಶುಭ ಹಾರೈಕೆಯನ್ನು ಸ್ವೀಕರಿಸಿದರು.



