ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ವಿಶ್ವಗುರು ಬಸವಣ್ಣನವರ ಕುರಿತು ಆಕ್ಷೇಪಾರ್ಹ ಅಂಶಗಳನ್ನು ಒಳಗೊಂಡಿದೆ ಎನ್ನಲಾದ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಪುಸ್ತಕದ ಲೇಖಕ ರವಿ ಹಂಜ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಪುಟ್ಟಬಸವರಾಜು ಅಗ್ರಹಿಸಿದರು.
ನಗರದ ಬಸವ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಸಮುದಾಯದ ವತಿಯಿಂದ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದಾವಣಗೆರೆ ಮೂಲದ ಲೇಖಕ ರವಿ ಹಂಜ್ ಅವರು ಬರೆದಿರುವ 'ಬಸವ ಮಂಟಪ' ಕೃತಿಯಲ್ಲಿನ ಕೆಲವು ಬರಹಗಳು ಮತ್ತು ಸಂದರ್ಶನದಲ್ಲಿ ನೀಡಿರುವ ಹೇಳಿಕೆಗಳಲ್ಲಿ ಬಸವಣ್ಣನವರು ಮತ್ತು ಲಿಂಗಾಯತ ಸಮುದಾಯವನ್ನು ಅವಮಾನಿಸಿದ್ದಾರೆ. ಅವರ ಈ ನಡೆಯನ್ನು ವೀರಶೈವ ಲಿಂಗಾಯತ ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಎಂದರು.
ವಿಶ್ವಗುರು ಬಸವಣ್ಣನ ಕುರಿತು ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಉಲ್ಲೇಖವಿದೆ ಎಂದು ಹೇಳಲಾದ ಬಸವ ಮಂಟಪ ಕೃತಿಯನ್ನು ರಾಜ್ಯ ಸರ್ಕಾರ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು. ಬಸವ ಮಂಟಪ ಪುಸ್ತಕ ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಲು ಈ ಮೂಲಕ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಡಿ. 27 ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಸಮುದಾಯದ ವತಿಯಿಂದ ಪ್ರತಿಭಟನೆ
ವಿಶ್ವಗುರು ಬಸವಣ್ಣನವರ ಕುರಿತು ಆಕ್ಷೇಪಾರ್ಹ ಅಂಶಗಳನ್ನು ಒಳಗೊಂಡಿದೆ ಎನ್ನಲಾದ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಬಸವಣ್ಣನವರ ತತ್ವಗಳ ಕುರಿತು ಅಪಪ್ರಚಾರದ ಹಿಂದಿರುವ ಕಾಣದ ಕೈಗಳ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಅಗ್ರಹಿಸಿ ತಾಲ್ಲೂಕಿನ ಬಸವೇಶ್ವರ ವೃತ್ತ (ತಾಲ್ಲೂಕು ಕಚೇರಿ ವೃತ್ತ )ದಿಂದ ಪಾದಯಾತ್ರೆ ಮೂಲಕ ತೆರಳಿ ತಾಲ್ಲೂಕು ದಂಡಾಧಿಕಾರಿಗಳಿಗೆ ಸಮುದಾಯದ ಮುಖಂಡರೊಂದಿಗೆ ಮನವಿ ಸಲ್ಲಿಸಲಾಗುವುದು ಎಂದು ಬಸವ ಭವನ ಅಧ್ಯಕ್ಷ ಹಾಗೂ ವೀರಶೈವ ಕ್ಷೇಮಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಶಿವಾನಂದಪ್ಪ ತಿಳಿಸಿದರು.
ವೀರಶೈವ ಮಹಾಸಭಾ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಘಟಕದ ಅಧ್ಯಕ್ಷ ಲೋಕೇಶ್ ನಾಗಸಂದ್ರ ಮಾತನಾಡಿ ಈ ಕೃತಿ ಮೂಲಕ ಬಸವಣ್ಣ ಅವರ ಬಗ್ಗೆ ತಪ್ಪು ಸಂದೇಶ ನೀಡಲಾಗಿದೆ. ನಮ್ಮ ಸಮುದಾಯದ ಜನರ ಭಾವನೆಗೆ ಧಕ್ಕೆ ತರುವ ಈ ಪುಸ್ತಕ ಮಾರಾಟ ನಿಷೇಧಿಸಬೇಕು. ಕಾನೂನು ಕ್ರಮವನ್ನೂ ಕೈಗೊಳ್ಳಬೇಕು. ಇದರ ಬೆನ್ನಿಗೆ ಈ ಪುಸ್ತಕ ಮುಟ್ಟುಗೋಲು ಹಾಕುವ ಬಗ್ಗೆ ಸಂಪುಟ ಸಭೆಯಿಂದ ನಿರ್ಣಯ ಹೊರಬಿದ್ದಿದೆ. ಇದನ್ನು ನಾವು ಸ್ವಾಗತಿಸುತ್ತೇವೆ ಎಂದರು.
ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಅವಹೇಳನಕಾರಿ ಮತ್ತು ಅಕ್ಷೇಪಾರ್ಹ ಹೇಳಿಕೆ ನೀಡಿ, ಲೇಖನ ಬರೆದಿದ್ದಾರೆ. ಲೇಖಕ ರವಿ ಹಂಜ್ ಹಾಗೂ ಇದಕ್ಕೆ ವೇದಿಕೆ ನೀಡಿದ ಸಂಸ್ಥೆ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ.ವಿವಾದಾತ್ಮಕ ಸಂಗತಿಗಳನ್ನು ಒಳಗೊಂಡಿರುವ 'ಬಸವ ಮಂಟಪ' ಕೃತಿಯನ್ನು ಬಿಡುಗಡೆ ಮಾಡಿದರೆ, ಲಿಂಗಾಯತ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಆತಂಕವಿದೆ."ಬಸವಣ್ಣನವರ ತತ್ವಗಳ ಕುರಿತು ಅಪಪ್ರಚಾರ, ವಿಷ ಪಸರಿಸುತ್ತಿರುವುದು ಏಕೆ? ಇದರ ಹಿಂದಿನ ಉದ್ದೇಶವೇನು? ಹಿಂದಿರುವ ಕಾಣದ ಕೈಗಳು ಯಾರವು ಎಂಬುದು ಬಹಿರಂಗವಾಗಬೇಕು. ಕೃತಿ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಉದಯ ಆರಾಧ್ಯ ಮಾತನಾಡಿ ಬಸವಣ್ಣನವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಸಮಾನತೆ, ಸಾಮಾಜಿಕ ನ್ಯಾಯ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಸಾರಿದ ಜಾಗತಿಕ ಮಹಾನ್ ದಾರ್ಶನಿಕರು. ಅವರ ವ್ಯಕ್ತಿತ್ವ ಮತ್ತು ವಿಚಾರಧಾರೆಗೆ ಧಕ್ಕೆ ತರುವಂತಹ ತಪ್ಪು ಮಾಹಿತಿ ಅಥವಾ ಆಕ್ಷೇಪಾರ್ಹ ಅಂಶಗಳು ಕೃತಿಯಲ್ಲಿದ್ದರೆ ಅವುಗಳ ಸತ್ಯಾಸತ್ಯತೆಯನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೃತಿಯಲ್ಲಿನ ಅಂಶಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಕಾನೂನುಬಾಹಿರ ಅಂಶಗಳು ಕಂಡುಬಂದಲ್ಲಿ ಲೇಖಕರು ಹಾಗೂ ಸಂಬಂಧಪಟ್ಟವರ ವಿರುದ್ಧ ಕಾನೂನಿನ ಅನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು. ಬಸವಣ್ಣನವರ ವಚನ ಸಾಹಿತ್ಯ ಮತ್ತು ತತ್ವಾದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ಸಮರ್ಪಕವಾಗಿ ತಲುಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ವೀರಶೈವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೆ. ವಿ. ಪಾಪಣ್ಣ, ವೀರಶೈವ ಮಹಾಸಭಾದ ಜಿಲ್ಲಾ ನಿರ್ದೇಶಕ ಆರ್. ಎಸ್. ಮಂಜುನಾಥ್,ತಾಲ್ಲೂಕು ಅಧ್ಯಕ್ಷ ಸುಜಯ್, ವೀರಶೈವ ಮಹಾಸಭಾ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಘಟಕದ ಅಧ್ಯಕ್ಷ ಲೋಕೇಶ್ ನಾಗಸಂದ್ರ, ಮುಖಂಡರಾದ ಜೆ. ವೈ.ಮಲ್ಲಪ್ಪ, ಕೆ. ಮಹಾಲಿಂಗಯ್ಯ,ಮುನಿರಾಜು, ಸುನೀಲ ಕುಮಾರ್, ಗಗನ್, ಪ್ರಭಾಕರ್, ಗಿರೀಶ್ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯದ ಹಲವು ಪ್ರಮುಖರು ಹಾಜರಿದ್ದರು.




