ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ನೂತನ ಮುಖ್ಯಮಂತ್ರಿ ಆಯ್ಕೆ ಮತ್ತು ಪ್ರಮಾಣವಚನ ಸ್ವೀಕಾರಕ್ಕೆ ಭರದಿಂದ ಸಿದ್ಧತೆಗಳು ಆರಂಭವಾಗಿವೆ.
ಶನಿವಾರ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಅಧಿಕೃತವಾಗಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗುವುದು. ಇವರು ಬರುವ ಬುಧವಾರ (ಜೂನ್ 3) ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ರಾಜಭವನದಲ್ಲಿ ಸರಳ ಸಮಾರಂಭ:
ಈ ಕುರಿತು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, "ಜೂನ್ 3 ರಂದು ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಕಾರ್ಯಕ್ರಮವು ರಾಜಭವನದ ಗ್ಲಾಸ್ ಹೌಸ್‌ನಲ್ಲಿ ಅತ್ಯಂತ ಸರಳವಾಗಿ ನಡೆಯಲಿದೆ," ಎಂದು ಅಧಿಕೃತವಾಗಿ ಪ್ರಕಟಿಸಿದರು.
ಆರಂಭದಲ್ಲಿ ಕಾರ್ಯಕ್ರಮದ ಸ್ಥಳದ ಬಗ್ಗೆ ಒಂದಿಷ್ಟು ಗೊಂದಲಗಳಿದ್ದವು. ಆದರೆ ಅಂತಿಮವಾಗಿ ಲೋಕಭವನದಲ್ಲೇ (ರಾಜಭವನ) ನಡೆಸಲು ತೀರ್ಮಾನಿಸಲಾಗಿದೆ. ಡಿ.ಕೆ. ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯಾಗುತ್ತಿದ್ದರೂ ಸಹ, ಯಾವುದೇ ಆಡಂಬರವಿಲ್ಲದೆ ಸರಳವಾಗಿ ಕಾರ್ಯಕ್ರಮ ಮುಗಿಸಲು ಪಕ್ಷ ನಿರ್ಧರಿಸಿದೆ.
ಸಾರ್ವಜನಿಕರಿಗೆ ಪ್ರವೇಶವಿಲ್ಲ: ಬೆಂಗಳೂರಿಗೆ ಬರದಂತೆ ಮನವಿ
ಪ್ರಸ್ತುತ ರಾಜ್ಯದಲ್ಲಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ.
ಪಾಸ್‌ಗಳ ವಿತರಣೆ ಇಲ್ಲ: ಪ್ರಮಾಣವಚನ ಸಮಾರಂಭಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರುವುದಿಲ್ಲ. ಯಾರಿಗೂ ಯಾವುದೇ ರೀತಿಯ ಪಾಸ್‌ಗಳನ್ನು ನೀಡಲಾಗುತ್ತಿಲ್ಲ.
ಬಸ್‌ಗಳ ಬುಕಿಂಗ್ ರದ್ದು: ರಾಜ್ಯದ ವಿವಿಧ ಭಾಗಗಳಿಂದ ಜನರನ್ನು ಕರೆತರಲು ಮೊದಲು 10,000 ದಿಂದ 15,000 ಬಸ್‌ಗಳನ್ನು ಕಾಯ್ದಿರಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಇಂಧನ ಬಿಕ್ಕಟ್ಟು ಮತ್ತು ಸಂಚಾರ ದಟ್ಟಣೆಯ (Traffic) ಕಾರಣದಿಂದ ಆ ಯೋಜನೆಯನ್ನು ಕೈಬಿಡಲಾಗಿದೆ.
ತೈಲ ಬೆಲೆ ಏರಿಕೆಯ ಬಿಸಿ: ಪ್ರಸ್ತುತ ತೈಲ ಬೆಲೆ ಏರಿಕೆಯಾಗಿರುವುದರಿಂದ ದೊಡ್ಡ ಮಟ್ಟದ ಆಡಂಬರದ ಕಾರ್ಯಕ್ರಮ ಬೇಡ ಎಂದು ನಿರ್ಧರಿಸಲಾಗಿದೆ.
"ಇಂಧನ ಬಿಕ್ಕಟ್ಟು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಸರಳವಾಗಿ ಕಾರ್ಯಕ್ರಮ ನಡೆಸಲು ಪಕ್ಷ ನಿರ್ದೇಶನ ನೀಡಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಯಾರೂ ಬೆಂಗಳೂರಿಗೆ ಬರಬಾರದು," ಎಂದು ಜಿ.ಸಿ. ಚಂದ್ರಶೇಖರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.



