ಚಂದ್ರವಳ್ಳಿ ನ್ಯೂಸ್, ಧಾರವಾಡ:
ವಿದ್ಯಾರ್ಥಿನಿಯೊಬ್ಬರ ಜೊತೆ ಅನೈತಿಕ ಸಂಬಂಧ ಹಾಗೂ ಗಂಭೀರ ಶೋಷಣೆಯ ಆರೋಪ ಎದುರಿಸುತ್ತಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ (ಬೊಟಾನಿ) ವಿಭಾಗದ ಪ್ರಾಧ್ಯಾಪಕ ಪ್ರೊ. ದೇವರಾಜನ್ ತಂಗದುರೈ ಅವರನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.
ಸಂಶೋಧನಾ ವಿದ್ಯಾರ್ಥಿನಿಗೆ ವಂಚನೆ, ಬಲವಂತದ ಗರ್ಭಪಾತ ಹಾಗೂ ಮಾನಸಿಕ ಕಿರುಕುಳ ನೀಡಿದ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಪ್ರೀತಿಯ ನಾಟಕ, ಮೂರು ಬಾರಿ ಬಲವಂತದ ಗರ್ಭಪಾತ!
ಮೂಲಗಳ ಪ್ರಕಾರ, ವಿಜಯಪುರ ಮೂಲದ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿಯೊಬ್ಬರನ್ನು ಪ್ರೀತಿಸುವ ನಾಟಕವಾಡಿದ್ದ ಪ್ರಾಧ್ಯಾಪಕ ದೇವರಾಜನ್, ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದರು. ಈ ಅವಧಿಯಲ್ಲಿ ವಿದ್ಯಾರ್ಥಿನಿಗೆ ಸಮ್ಮತಿಯಿಲ್ಲದಿದ್ದರೂ ಮೂರು ಬಾರಿ ಬಲವಂತವಾಗಿ ಗರ್ಭಪಾತ ಮಾಡಿಸಲಾಗಿತ್ತು ಎಂಬ ಆಘಾತಕಾರಿ ಆರೋಪ ಕೇಳಿಬಂದಿದೆ.
ವಿಷಯ ಪೋಷಕರಿಗೆ ತಿಳಿದ ಬಳಿಕ ತೀವ್ರ ಮಾನಸಿಕ ನೊಂದ ವಿದ್ಯಾರ್ಥಿನಿ, ತನ್ನ ಉನ್ನತ ವ್ಯಾಸಂಗ ಹಾಗೂ ಸಂಶೋಧನೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸ್ವಗ್ರಾಮಕ್ಕೆ ಮರಳಿದ್ದರು.
ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ವೈರಲ್; ಆಡಿಯೋ ಸಾಕ್ಷ್ಯ ಸಲ್ಲಿಕೆ
ಆರೋಪಿ ಪ್ರಾಧ್ಯಾಪಕ ಸ್ವತಃ ವಿದ್ಯಾರ್ಥಿನಿಯೊಂದಿಗಿನ ಆಪ್ತ ಫೋಟೋಗಳನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ಎನ್ನಲಾಗಿದೆ. ಇದು ವಿಶ್ವವಿದ್ಯಾಲಯದ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ವಿದ್ಯಾರ್ಥಿನಿ ಧಾರವಾಡ ಬಿಟ್ಟು ಹೋದ ಮೇಲೂ ಆಕೆಗೆ ಸಂಶೋಧನೆ ಪೂರ್ಣಗೊಳಿಸಲು ಸಹಕರಿಸದೇ, ಮತ್ತೆ ಸಂಪರ್ಕಕ್ಕೆ ಸಿಗುವಂತೆ ಪ್ರಾಧ್ಯಾಪಕ ತೀವ್ರ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಈ ಕುರಿತು ಮತ್ತೊಬ್ಬ ಸಂಶೋಧನಾ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ಸಂಘಟನೆಗಳು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಿದ್ದರು. ದೂರಿನ ಜೊತೆಗೆ ಪ್ರಾಧ್ಯಾಪಕನ ವಿರುದ್ಧದ ಕೆಲವು ಆಡಿಯೋ ಸಂಭಾಷಣೆಗಳು ಹಾಗೂ ಪ್ರಮುಖ ಸಾಕ್ಷ್ಯಾಧಾರಗಳನ್ನು ವಿವಿಗೆ ಹಸ್ತಾಂತರಿಸಲಾಗಿದೆ.
ಸಮಗ್ರ ತನಿಖೆಗೆ ಆದೇಶಿಸಿದ ವಿಶ್ವವಿದ್ಯಾಲಯ
ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ವಿಶ್ವವಿದ್ಯಾಲಯದ ಉನ್ನತಾಧಿಕಾರಿಗಳು, ಪ್ರಾಧ್ಯಾಪಕ ದೇವರಾಜನ್ ತಂಗದುರೈ ವಿರುದ್ಧ ಆಂತರಿಕ ಶಿಸ್ತುಕ್ರಮ ಕೈಗೊಂಡು ಅಮಾನತು ಆದೇಶ ಹೊರಡಿಸಿದ್ದಾರೆ.
"ಶೈಕ್ಷಣಿಕ ವಲಯದ ಪವಿತ್ರತೆಗೆ ಧಕ್ಕೆ ತರುವ ಇಂತಹ ಘಟನೆಗಳನ್ನು ಸಹಿಸುವುದಿಲ್ಲ. ಸದ್ಯ ಪ್ರಾಧ್ಯಾಪಕನನ್ನು ಅಮಾನತುಗೊಳಿಸಿ ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ತನಿಖಾ ಸಮಿತಿಯ ವರದಿ ಬಂದ ತಕ್ಷಣ ಸತ್ಯಾಸತ್ಯತೆ ಆಧರಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು" ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ. ಭವಿಷ್ಯದ ಭರವಸೆಯಾಗಬೇಕಿದ್ದ ಉನ್ನತ ಶಿಕ್ಷಣ ಕೇಂದ್ರದಲ್ಲಿ ಇಂತಹ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.



