Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪಾಕೆಟ್ ತುಂಬಿತು ನೋಟು... ಮನುಷ್ಯತ್ವಕ್ಕೆ ಬಿತ್ತು ಪೆಟ್ಟು!

ಚಂದ್ರವಳ್ಳಿ ನ್ಯೂಸ್, ಮೈಸೂರು:
ಹಣ ಬದುಕಿನ ಅವಿಭಾಜ್ಯ ಅಗತ್ಯ. ಹಣವಿಲ್ಲದೆ ಬದುಕಿನ ಅನೇಕ ಅಗತ್ಯಗಳನ್ನು ಪೂರೈಸುವುದು ಕಷ್ಟ. ಆದರೆ ಹಣವೇ ಬದುಕಿನ ಅಂತಿಮ ಗುರಿಯಾದಾಗ ಮನುಷ್ಯ ತನ್ನೊಳಗಿನ ಮಾನವೀಯತೆಯನ್ನು ಕಳೆದುಕೊಳ್ಳುವ ಅಪಾಯ ಎದುರಾಗುತ್ತದೆ. ಪಾಕೆಟ್‌ನಲ್ಲಿ ನೋಟುಗಳು ಹೆಚ್ಚಾಗುವುದು ಸಂಪತ್ತಿನ ಸಂಕೇತವಾಗಬಹುದು. ಆದರೆ ಹೃದಯದಲ್ಲಿ ಕರುಣೆ
, ಔದಾರ್ಯ, ಪ್ರೀತಿ ಮತ್ತು ಪರೋಪಕಾರದ ಮನಸ್ಸು ಹೆಚ್ಚಾಗದಿದ್ದರೆ ಆ ಸಂಪತ್ತು ಬದುಕಿಗೆ ಪೂರ್ಣತೆಯನ್ನು ನೀಡುವುದಿಲ್ಲ.

ನೋಟು ತುಂಬಿದ ಪಾಕೆಟ್
ಕರುಣೆ ತುಂಬಲಿ ಹೃದಯ.
ಹಣದ ಜೊತೆ ಮಾನವೀಯತೆ
ಅದೇ ಬದುಕಿನ ಸೌಭಾಗ್ಯ.

Advertisement

ಮನುಷ್ಯ ಹುಟ್ಟುವಾಗ ಬರಿಗೈಯಲ್ಲಿ ಬರುತ್ತಾನೆ. ಬದುಕಿನ ಪಯಣದಲ್ಲಿ ಸಂಪತ್ತು, ಅಧಿಕಾರ, ಸ್ಥಾನಮಾನ, ಆಸ್ತಿ ಎಲ್ಲವನ್ನೂ ಗಳಿಸುತ್ತಾನೆ. ಆದರೆ ಕೊನೆಯಲ್ಲಿ ಯಾವುದನ್ನೂ ತನ್ನೊಂದಿಗೆ ಕೊಂಡೊಯ್ಯಲು ಸಾಧ್ಯವಿಲ್ಲ. ಆದ್ದರಿಂದ ಗಳಿಕೆಯ ಜೊತೆಗೆ ಅದರ ಸಾರ್ಥಕ ಬಳಕೆಯನ್ನೂ ಕಲಿಯಬೇಕು. ಹಣ ನಮ್ಮ ಕೈಯಲ್ಲಿರಬೇಕೇ ಹೊರತು, ನಮ್ಮ ಮನಸ್ಸಿನ ಮೇಲೆ ಅಧಿಕಾರ ಸಾಧಿಸಬಾರದು.

ಒಂದು ಪಟ್ಟಣದಲ್ಲಿ ರಾಮಣ್ಣ ಎಂಬ ವ್ಯಾಪಾರಿಯಿದ್ದ. ಆರಂಭದಲ್ಲಿ ಅವನ ಅಂಗಡಿ ಚಿಕ್ಕದಾಗಿತ್ತು. ಆದರೆ ಅವನ ಹೃದಯ ದೊಡ್ಡದಾಗಿತ್ತು. ಬಡ ಗ್ರಾಹಕರು ಹಣವನ್ನು ತಡವಾಗಿ ಕೊಟ್ಟರೂ ನಂಬಿಕೆಯಿಂದ ಸಾಮಾನು ನೀಡುತ್ತಿದ್ದ. ಯಾರಿಗಾದರೂ ತುರ್ತು ಅಗತ್ಯವಿದ್ದರೆ ತನ್ನ ಕೈಲಾದಷ್ಟು ನೆರವು ನೀಡುತ್ತಿದ್ದ. ಹೀಗಾಗಿ ಅವನ ಅಂಗಡಿಯಲ್ಲಿ ವ್ಯಾಪಾರಕ್ಕಿಂತಲೂ ವಿಶ್ವಾಸವೇ ಹೆಚ್ಚು ಬೆಳೆಯಿತು.

ಕಾಲಕ್ರಮೇಣ ವ್ಯಾಪಾರ ವೃದ್ಧಿಯಾಯಿತು. ಹಣ ಹೆಚ್ಚಾಯಿತು. ದೊಡ್ಡ ಮನೆ, ಹೊಸ ವಾಹನಗಳು, ಆಸ್ತಿಗಳು ಬಂದವು. ಆದರೆ ಸಂಪತ್ತು ಹೆಚ್ಚಾದಂತೆ ರಾಮಣ್ಣನ ಸ್ವಭಾವದಲ್ಲಿ ಬದಲಾವಣೆ ಕಾಣಿಸತೊಡಗಿತು. ಹಿಂದೆ ಬಡವರ ನೋವು ಕೇಳುತ್ತಿದ್ದವನು ಈಗ ಅವರ ಸಾಮರ್ಥ್ಯವನ್ನು ಅಳೆಯತೊಡಗಿದ. ಹಣವಿರುವವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದ. ಹಣವಿಲ್ಲದವರ ಮಾತಿಗೆ ಕಿವಿಗೊಡುತ್ತಿರಲಿಲ್ಲ.

ಒಂದು ದಿನ ಅವನ ಬಾಲ್ಯದ ಸ್ನೇಹಿತ ಅನಾರೋಗ್ಯದಿಂದ ಬಳಲುತ್ತಾ ಚಿಕಿತ್ಸೆಗಾಗಿ ನೆರವು ಕೇಳಿದ. ರಾಮಣ್ಣನ ಬಳಿ ಸಹಾಯ ಮಾಡುವಷ್ಟು ಹಣವಿದ್ದರೂ ಆತ ನಿರಾಕರಿಸಿದ. ನನಗೂ ಸಾಕಷ್ಟು ಖರ್ಚುಗಳಿವೆಎಂದು ಹೇಳಿ ಕಳುಹಿಸಿದ. ಅದೇ ಸಂಜೆ ದೊಡ್ಡ ಉದ್ಯಮಿಯೊಬ್ಬ ವ್ಯಾಪಾರಕ್ಕಾಗಿ ಬಂದಾಗ ಅವನಿಗೆ ಅದ್ಧೂರಿ ಆತಿಥ್ಯ ನೀಡಿದ. ಆ ದಿನ ರಾಮಣ್ಣನ ಪಾಕೆಟ್‌ನಲ್ಲಿ ಹಣವಿತ್ತು. ಆದರೆ ಹೃದಯದಲ್ಲಿ ಮನುಷ್ಯತ್ವ ಕಡಿಮೆಯಾಗಿತ್ತು.

ಇದೇ ಇಂದಿನ ಬದುಕಿನ ದೊಡ್ಡ ಪ್ರಶ್ನೆ. ಹಣ ಸಂಪಾದಿಸುವುದೇ ತಪ್ಪಲ್ಲ. ಪರಿಶ್ರಮದಿಂದ ಗಳಿಸಿದ ಸಂಪತ್ತು ಗೌರವಕ್ಕೆ ಅರ್ಹ. ಆದರೆ ಸಂಪತ್ತಿನ ಹಿಂದೆ ಓಡುವಾಗ ಸಂಬಂಧಗಳನ್ನು ಕಳೆದುಕೊಳ್ಳುವುದು, ಬಡವನ ನೋವನ್ನು ನಿರ್ಲಕ್ಷಿಸುವುದು, ದುರ್ಬಲನ ಹಕ್ಕನ್ನು ಕಸಿದುಕೊಳ್ಳುವುದು, ಪ್ರಾಮಾಣಿಕತೆಯನ್ನು ಮಾರಿಕೊಳ್ಳುವುದು ಮಾತ್ರ ಅಪಾಯಕಾರಿ.

ಸಂತ ಬಸವಣ್ಣನವರ ಕಾಯಕ ಮತ್ತು ದಾಸೋಹದ ತತ್ವ ಇಲ್ಲಿ ಬಹಳ ಅರ್ಥಪೂರ್ಣವಾಗುತ್ತದೆ. ದುಡಿದು ಗಳಿಸುವುದು ಕಾಯಕ. ಗಳಿಸಿದುದನ್ನು ಸಮಾಜದ ಒಳಿತಿಗೂ ಬಳಸುವುದು ದಾಸೋಹ. ಸಂಪತ್ತು ಕೇವಲ ಸಂಗ್ರಹವಾಗಿ ಉಳಿಯದೆ, ಇನ್ನೊಬ್ಬರ ಬದುಕಿಗೆ ಬೆಳಕಾಗಬೇಕು ಎಂಬುದು ಈ ಚಿಂತನೆಯ ಅಂತರಂಗ. ದುಡಿಮೆಯ ಕೈಗೆ ದಯೆಯ ಹೃದಯವೂ ಜೊತೆಯಾಗಬೇಕು.

ಸಂತ ಕನಕದಾಸರ ಚಿಂತನೆಯೂ ಮನುಷ್ಯನ ಅಂತರಂಗದ ಶುದ್ಧತೆಯನ್ನು ಮುಖ್ಯವಾಗಿರಿಸುತ್ತದೆ. ಹೊರಗಿನ ವೈಭವಕ್ಕಿಂತ ಒಳಗಿನ ಗುಣವೇ ವ್ಯಕ್ತಿಯ ನಿಜವಾದ ಅಲಂಕಾರ. ದೊಡ್ಡ ಮನೆ ಇದ್ದರೂ ದೊಡ್ಡ ಮನಸ್ಸು ಇಲ್ಲದಿದ್ದರೆ ಆ ವೈಭವ ಅಪೂರ್ಣ. ಸರಳ ಬದುಕಿದ್ದರೂ ಹೃದಯದಲ್ಲಿ ಪರೋಪಕಾರವಿದ್ದರೆ ಆ ಜೀವನ ಅರ್ಥಪೂರ್ಣ. ಅಲ್ಲವೇ ನೋಟು ತುಂಬಿದ ಪಾಕೆಟ್, ಮನವೇಕೆ ಬರಿದಾಗಬೇಕು? ಮತ್ತು ಸಂಪತ್ತು ಬಂದಾಗ ಕರುಣೆ ಏಕೆ ದೂರವಾಗಬೇಕು? ಯಾರೇ ಆಗಲಿ ಕೊಟ್ಟ ಕೈಯ ನೆನಪು ಕಾಲದಾಚೆಯೂ ಉಳಿಯಬೇಕು, ಅಂತಹ ವಾತಾವರಣ ಮನುಷ್ಯತ್ವದ ಬೆಳಕಿನಲ್ಲಿ ಬದುಕು ಅರಳಬೇಕು.

ಹಣದಿಂದ ದೊಡ್ಡ ಮನೆ ಕಟ್ಟಬಹುದು. ಆದರೆ ಆ ಮನೆಯಲ್ಲಿ ಪ್ರೀತಿ ಇಲ್ಲದಿದ್ದರೆ ಅದು ಕೇವಲ ಕಟ್ಟಡ. ಹಣದಿಂದ ದುಬಾರಿ ಹಾಸಿಗೆ ಖರೀದಿಸಬಹುದು. ಆದರೆ ನೆಮ್ಮದಿಯ ನಿದ್ರೆ ಖರೀದಿಸಲು ಸಾಧ್ಯವಿಲ್ಲ. ಹಣದಿಂದ ಔಷಧಿ ಕೊಳ್ಳಬಹುದು. ಆದರೆ ಆತ್ಮೀಯತೆಯ ಸಾಂತ್ವನವನ್ನು ಕೊಳ್ಳಲು ಸಾಧ್ಯವಿಲ್ಲ. ಹಣದಿಂದ ಅಧಿಕಾರ ಪಡೆಯಬಹುದು. ಆದರೆ ನಿಜವಾದ ಗೌರವವನ್ನು ಬಲವಂತವಾಗಿ ಪಡೆಯಲು ಸಾಧ್ಯವಿಲ್ಲ.

ಸಂತರ ಉಪದೇಶದ ಸಾರವೂ ಇದೇ. ಸಂಪತ್ತು ಕೈಯಲ್ಲಿ ಇರಲಿ, ಸ್ವಾರ್ಥ ಹೃದಯದಲ್ಲಿ ನೆಲೆಸಬಾರದು.ಜೀವನದಲ್ಲಿ ಗಳಿಕೆ ಬೇಕು. ಆದರೆ ಗಳಿಕೆಯ ಜೊತೆ ಹಂಚಿಕೆಯೂ ಇರಬೇಕು. ಸ್ವಂತ ಕುಟುಂಬದ ಭದ್ರತೆ ಮುಖ್ಯ. ಆದರೆ ಸಮಾಜದ ನೋವಿನ ಕಡೆ ಕಣ್ಣು ಮುಚ್ಚುವುದು ಮಾನವೀಯತೆಯ ಲಕ್ಷಣವಲ್ಲ.

ಮಹಾತ್ಮ ಗಾಂಧೀಜಿಯವರ ಟ್ರಸ್ಟೀಶಿಪ್ಪರಿಕಲ್ಪನೆಯಲ್ಲಿಯೂ ಸಂಪತ್ತನ್ನು ಸಮಾಜದ ಹಿತಕ್ಕಾಗಿ ಜವಾಬ್ದಾರಿಯಿಂದ ಬಳಸುವ ಚಿಂತನೆ ಕಂಡುಬರುತ್ತದೆ. ಸಂಪತ್ತಿರುವವನು ಅದರ ಸಂರಕ್ಷಕನಂತೆ ನಡೆದು, ತನ್ನ ಸಂಪನ್ಮೂಲಗಳಿಂದ ಸಮಾಜಕ್ಕೂ ಪ್ರಯೋಜನವಾಗುವಂತೆ ನೋಡಿಕೊಳ್ಳಬೇಕು ಎಂಬುದು ಅದರ ಮೂಲಭಾವ.

ಒಬ್ಬ ತಂದೆ ಮಕ್ಕಳಿಗೆ ಕೋಟ್ಯಂತರ ರೂಪಾಯಿ ಆಸ್ತಿ ಬಿಟ್ಟುಹೋಗಬಹುದು. ಆದರೆ ಪ್ರಾಮಾಣಿಕತೆ, ಶ್ರಮ, ದಯೆ ಮತ್ತು ಸಂಯಮವನ್ನು ಕಲಿಸದಿದ್ದರೆ ಆಸ್ತಿ ಮಾತ್ರ ಅವರ ಬದುಕನ್ನು ಶ್ರೀಮಂತಗೊಳಿಸುವುದಿಲ್ಲ. ಅದೇ ರೀತಿ ಒಬ್ಬ ಸಾಮಾನ್ಯ ವ್ಯಕ್ತಿ ಕಡಿಮೆ ಸಂಪಾದಿಸಿದರೂ, ಹಸಿದವನಿಗೆ ಊಟ ನೀಡಿದರೆ, ಕಷ್ಟದಲ್ಲಿರುವವನಿಗೆ ಧೈರ್ಯ ತುಂಬಿದರೆ, ಅಸಹಾಯಕರಿಗೆ ನೆರವಾದರೆ ಅವನ ಮಾನವೀಯ ಸಂಪತ್ತು ಅಪಾರ.

ಹಣದ ಹಿಂದೆ ಓಡುವ ಸಮಾಜದಲ್ಲಿ ಇಂದು ಮಕ್ಕಳಿಗೂ ಸರಿಯಾದ ಮೌಲ್ಯಗಳನ್ನು ಕಲಿಸುವ ಅಗತ್ಯವಿದೆ. ಹೆಚ್ಚು ಸಂಪಾದಿಸುಎಂಬ ಮಾತಿನ ಜೊತೆಗೆ ಪ್ರಾಮಾಣಿಕವಾಗಿ ಸಂಪಾದಿಸುಎನ್ನಬೇಕು. ದೊಡ್ಡವನಾಗುಎನ್ನುವುದರ ಜೊತೆಗೆ ಒಳ್ಳೆಯವನಾಗುಎನ್ನಬೇಕು. ಯಶಸ್ವಿಯಾಗುಎನ್ನುವುದರ ಜೊತೆಗೆ ಯಾರನ್ನೂ ತುಳಿದು ಯಶಸ್ಸು ಪಡೆಯಬೇಡಎನ್ನಬೇಕು.

ಹಿರಿಯ ಸಾಹಿತಿ ಕಾಶಿಗೌರವರ ಚಿಂತನೆಯ ಸಾರವನ್ನು ಹೀಗೆ ಹೇಳಬಹುದು: ಹಣದ ಬೆಲೆ ಮಾರುಕಟ್ಟೆಯಲ್ಲಿ ಇರಬಹುದು. ಮನುಷ್ಯನ ಬೆಲೆ ಅವನ ನಡೆನುಡಿಯಲ್ಲಿ ಮಾತ್ರ.ಈ ಮಾತು ಬದುಕಿನ ನಿಜವಾದ ಅಳತೆಗೋಲನ್ನು ತೋರಿಸುತ್ತದೆ. ಮನುಷ್ಯನನ್ನು ಅವನ ಪಾಕೆಟ್‌ನಿಂದ ಅಳೆಯುವುದಕ್ಕಿಂತ ಅವನ ಹೃದಯದಿಂದ ಅಳೆಯುವುದು ಮುಖ್ಯ.

ಸಂಪತ್ತು ಬಂದಾಗ ವಿನಯ ಕಳೆದುಕೊಳ್ಳಬಾರದು. ಅಧಿಕಾರ ಬಂದಾಗ ಮಾನವೀಯತೆ ಮರೆಯಬಾರದು. ಹಣ ಹೆಚ್ಚಾದಾಗ ಅಗತ್ಯಕ್ಕಿಂತ ಹೆಚ್ಚಾಗಿ ಮತ್ತೊಬ್ಬರ ಪಾಲನ್ನೂ ಕಸಿದುಕೊಳ್ಳಬಾರದು. ನಮ್ಮ ಯಶಸ್ಸಿನ ನೆರಳಿನಲ್ಲಿ ಇನ್ನೊಬ್ಬರ ಬದುಕು ಕತ್ತಲಾಗಬಾರದು. ಪ್ರಮುಖವಾಗಿ ಉಳಿಯುವುದು ಬ್ಯಾಂಕ್ ಖಾತೆಯ ಮೊತ್ತವಲ್ಲ. ನಾವು ಎಷ್ಟು ಜನರ ಬದುಕಿಗೆ ನೆರವಾದೆವು, ಎಷ್ಟು ಹೃದಯಗಳನ್ನು ಗೆದ್ದೆವು, ಎಷ್ಟು ನೋವುಗಳಿಗೆ ಸಾಂತ್ವನ ನೀಡಿದೆವು ಎಂಬುದೇ ನಿಜವಾದ ಸಂಪತ್ತು.

ಪಾಕೆಟ್ ತುಂಬಿದ ನೋಟುಗಳು ಒಂದು ದಿನ ಖಾಲಿಯಾಗಬಹುದು. ಆದರೆ ಹಂಚಿದ ಪ್ರೀತಿ, ಮಾಡಿದ ಉಪಕಾರ, ತೋರಿದ ಕರುಣೆ ಮತ್ತು ಉಳಿಸಿದ ಮನುಷ್ಯತ್ವ ಮಾತ್ರ ಕಾಲ ಕಳೆದರೂ ನಮ್ಮ ಹೆಸರನ್ನು ಉಳಿಸುತ್ತದೆ. ಹಣದಿಂದ ಬದುಕು ಸುಖವಾಗಬಹುದು. ಆದರೆ ಮನುಷ್ಯತ್ವದಿಂದ ಮಾತ್ರ ಬದುಕು ಸಾರ್ಥಕವಾಗುತ್ತದೆ.
ಲೇಖನ: ಕೆ .ಎಸ್ .ಪ್ರಮೋದ್ ಕುಮಾರ್ ಎಂಬಿಎ (ಬಿಇ), ನೌಕರರು, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾಂಜಾ ಮಾರಾಟ ಮಾಡುತ್ತಿದ್ದ ರೌಡಿ ಶೀಟರ್ ಬಂಧನಪ್ರಜ್ವಲ್ ರೇವಣ್ಣ ರಾಜಕೀಯ ಅಂತ್ಯಕ್ಕೆ ಕುಮಾರಸ್ವಾಮಿಯೇ ಕಾರಣ: ಎಚ್.ಸಿ. ಬಾಲಕೃಷ್ಣ ಗಂಭೀರ ಆರೋಪ!ಯುಪಿಐ ಬಳಕೆದಾರರಿಗೆ ಮಹತ್ವದ ಸುದ್ದಿ: ಅ.15ರಿಂದ ಆಯ್ದ ವಹಿವಾಟುಗಳಿಗೆ ಶುಲ್ಕ ಜಾರಿ!ಅಪಾಯಕಾರಿ ಸೌಂದರ್ಯವರ್ಧಕಗಳ ಬಳಕೆ: ಪಾಕಿಸ್ತಾನದ 'ಗೋರಿ' ಹಾಗೂ 'ಚಾಂದನಿ' ಕ್ರೀಮ್‌ಗಳ ವಿರುದ್ಧ CDSCO ಎಚ್ಚರಿಕೆ!'ವಂದೇ ಮಾತರಂ' ವಿವಾದ: ಪ್ರಿಯಾಂಕ್ ಖರ್ಗೆ ಸವಾಲು, ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ!ದುರ್ಗಕ್ಕೆ ಭದ್ರಾ ನೀರು ಬಿಟ್ಟಿದ್ದಕ್ಕಾಗಿ ರೈತ ಹೋರಾಟ; ಹೆದ್ದಾರಿ ಬಂದ್, ರಾಜಕೀಯ ತಿರುವು!ಸೆ.19ರಂದು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಪ್ರವಾಸ, ಪೂರ್ವಭಾವಿ ಸಿದ್ಧತೆ ಸಮಯ ಪಾಲನೆ ಮತ್ತು ದಕ್ಷತೆಗೆ ಮತ್ತೊಂದು ಹೆಸರೇ ಸರ್. ಎಂ. ವಿಶ್ವೇಶ್ವರಯ್ಯ ​ಪಾಕೆಟ್ ತುಂಬಿತು ನೋಟು... ಮನುಷ್ಯತ್ವಕ್ಕೆ ಬಿತ್ತು ಪೆಟ್ಟು!ವಾಲ್ಮೀಕಿ ಮಹರ್ಷಿ ಕಂಚಿನ ಪ್ರತಿಮೆ ಸ್ಥಾಪನೆಗೆ ಭೂಮಿ ಪೂಜೆ