ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಕಳೆದ ಐದಾರು ದಶಕಗಳಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಗೂ ಉಚಿತವಾಗಿ ವೈದ್ಯಕೀಯ ಸೇವೆ ನೀಡುತ್ತಾ 'ಬಡವರ ವೈದ್ಯ' ಎಂದೇ ಜನಪ್ರಿಯರಾಗಿರುವ ದಾವಣಗೆರೆಯ ಹಿರಿಯ ಜನರಲ್ ಫಿಸಿಶಿಯನ್ ಡಾ. ಎಸ್. ಎಂ. ಎಲಿ ಅವರಿಗೆ ಈ ಬಾರಿಯ 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ' ಲಭಿಸಿದೆ.
ನಿಸ್ವಾರ್ಥ ಸೇವೆಗೆ ಸಿಕ್ಕ ಗೌರವ: ದಾವಣಗೆರೆಯ ಎಂಸಿಸಿ 'ಬಿ' ಬ್ಲಾಕ್ನಲ್ಲಿ ಪುಟ್ಟ ಕ್ಲಿನಿಕ್ ಇಟ್ಟುಕೊಂಡಿರುವ 87 ವರ್ಷದ ಡಾ. ಎಲಿ ಅವರು 1969ರಿಂದಲೂ ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ಸರಕಾರಿ ಸೇವೆ ಮತ್ತು ಬೋಧಕ ಹುದ್ದೆಗಳಿಂದ ನಿವೃತ್ತರಾದ ಮೇಲೆಯೂ ಸೇವಾ ಮನೋಭಾವ ಬಿಡದ ಇವರು, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಚಿಕಿತ್ಸೆ ಮತ್ತು ಉಚಿತ ಔಷಧಿ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಇನ್ನುಳಿದ ರೋಗಿಗಳಿಂದ ಕೇವಲ 10 ರಿಂದ 20 ರೂಪಾಯಿಗಳ ಸಾಂಕೇತಿಕ ಫೀಸ್ ಮಾತ್ರ ಪಡೆಯುವ ಇವರು, ಬಡವರು ಹಣ ನೀಡಲು ಬಂದರೆ ಅದನ್ನು ವಾಪಸ್ ಕಳುಹಿಸಿದ ಅನೇಕ ಉದಾಹರಣೆಗಳಿವೆ. ಹಣದ ವ್ಯಾಮೋಹವಿಲ್ಲದೆ ರೋಗಿಗಳಲ್ಲಿ ದೇವರನ್ನು ಕಾಣುವ ಇವರ ಬಳಿಗೆ ಬೆಂಗಳೂರು, ಚಿತ್ರದುರ್ಗ, ಹಾವೇರಿ, ಹರಿಹರ ಸೇರಿದಂತೆ ಹಲವು ಭಾಗಗಳಿಂದ ದಶಕಗಳ ಹಳೆಯ ರೋಗಿಗಳು ಇಂದಿಗೂ ಚಿಕಿತ್ಸೆಗೆ ಆಗಮಿಸುತ್ತಾರೆ.
"ದೇಹದಲ್ಲಿ ಶಕ್ತಿ ಇರುವವರೆಗೂ ಬಡವರ ಸೇವೆ ಮಾಡುತ್ತೇನೆ, ನನಗೆ ಹಣದ ಆಸೆ ಇಲ್ಲ," ಎಂದು ಹೇಳುವ ಡಾ. ಎಲಿ ಅವರ ಈ ಅನನ್ಯ ನಿಸ್ವಾರ್ಥ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.




