ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಾನ್ಯತಾ ಟೆಕ್ ಪಾರ್ಕ್ ಮತ್ತೆ ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
"ಬಂದಾ ಪುಟ್ಟಾ, ಹೋದ ಪುಟ್ಟಾ" ಎಂಬಂತೆ ಸರ್ಕಾರದ ನಡೆ ಇದೆ ಎಂದು ವ್ಯಂಗ್ಯವಾಡಿರುವ ಅವರು, "ಶೋಕಿಲಾಲ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ನೀವು ಫೋಟೋ ಶೂಟ್‌ಮಾಡಿಸಿಕೊಂಡಿದ್ದಕ್ಕೆ ಒಂದು ವರ್ಷ ಕಳೆದಿದೆ. ಆದರೆ, ಪರಿಸ್ಥಿತಿ ಮಾತ್ರ ಇನ್ನೂ ಹಾಗೇ ಇದೆ," ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಕಿಂಚಿತ್ತೂ ಸ್ಪಂದಿಸದ ಅಧಿಕಾರಿಗಳು: ನಿಖಿಲ್ ಆಕ್ರೋಶ-
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಲಿ ಅಥವಾ ಗ್ರೇಟರ್ ಬೆಂಗಳೂರು ಅಥಾರಿಟಿ ಅಧಿಕಾರಿಗಳಾಗಲಿ ನಾಗರಿಕರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಕಿಂಚಿತ್ತೂ ಮಾಡುತ್ತಿಲ್ಲ ಎಂಬುದು ಮಳೆ ಅವಾಂತರದಿಂದ ಮತ್ತೆ ಸಾಬೀತಾಗಿದೆ ಎಂದು ನಿಖಿಲ್ ದೂರಿದ್ದಾರೆ.
"2025ರ ಮೇ ತಿಂಗಳಿನಲ್ಲೂ ಮಳೆಗೆ ಮಾನ್ಯತಾ ಟೆಕ್‌ಪಾರ್ಕ್‌ಕೆರೆಯಂತಾಗಿತ್ತು. ಈ ವರ್ಷವೂ (2026) ಅದೇ ಕಥೆ ಮುಂದುವರಿದಿದೆ. ಇದೇನಾ ನೀವು ಹೇಳುವ ಬ್ರ್ಯಾಂಡ್‌ಬೆಂಗಳೂರು?" ಎಂದು ಅವರು ಪ್ರಶ್ನಿಸಿದ್ದಾರೆ.
ಮೂರು ವರ್ಷಗಳ ಸಾಧನೆ ಶೂನ್ಯ!
ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮುಂದುವರಿಸಿರುವ ಅವರು, "ಬ್ರ್ಯಾಂಡ್‌ಬೆಂಗಳೂರು ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆದಿದ್ದೇ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಸಾಧನೆ. ರಾಜಧಾನಿಯ ಅಭಿವೃದ್ಧಿ ಮಾತ್ರ ಸಂಪೂರ್ಣ ಶೂನ್ಯವಾಗಿದೆ," ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಿನ್ನೆಲೆಯಲ್ಲಿ, ಪ್ರತಿ ಬಾರಿ ಮಳೆಯಾದಾಗಲೂ ಐಟಿ ಹಬ್‌ಗಳು ಜಲಾವೃತಗೊಂಡು ಉದ್ಯೋಗಿಗಳು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದರೂ, ಸರ್ಕಾರ ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂಬ ಸಾರ್ವಜನಿಕ ವಲಯದ ಆಕ್ರೋಶಕ್ಕೆ ನಿಖಿಲ್ ಕುಮಾರಸ್ವಾಮಿ ಅವರ ಈ ಹೇಳಿಕೆ ಮತ್ತಷ್ಟು ಧ್ವನಿ ನೀಡಿದೆ.


