ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರವು 3 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಹಮ್ಮಿಕೊಂಡಿರುವ ‘ಸಾಧನಾ ಸಮಾವೇಶ’ದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ಪ್ರಶ್ನಿಸಿರುವ ಅವರು, "ರಾಜ್ಯದ ವಾಸ್ತವ ಸ್ಥಿತಿ ಗೊತ್ತಿದ್ದೂ ಈ ಬೃಹತ್ ಸಂಭ್ರಮಾಚರಣೆ ಬೇಕಿತ್ತೇ? ಯಾವ ಘನಂದಾರಿ ಸಾಧನೆಗಾಗಿ ಈ ವಿಜಯೋತ್ಸವ?" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿ ಆರ್. ಅಶೋಕ್ ಕೇಳಿರುವ ಪ್ರಮುಖ ಪ್ರಶ್ನೆಗಳು ಮತ್ತು ಆರೋಪಗಳ ವಿವರ ಇಲ್ಲಿದೆ:
ಖಜಾನೆ ಖಾಲಿ ಮಾಡಿದ ಸಾಧನೆಯೇ?
ರಾಜ್ಯದ ಒಟ್ಟು ಸಾಲದ ಹೊರೆ ಭೀಕರವಾಗಿ 8 ಲಕ್ಷ ಕೋಟಿ ದಾಟಿದೆ. ಆದರೂ 2025-26ರ ಬಜೆಟ್‌ನಲ್ಲಿ ಮತ್ತೆ 1.50 ಲಕ್ಷ ಕೋಟಿ ಸಾಲ ಮಾಡಲು ಯೋಜನೆ ರೂಪಿಸಲಾಗಿದೆ. ಇದರ ಪರಿಣಾಮವಾಗಿ ಇಂದು ಪ್ರತಿ ಕನ್ನಡಿಗನ ತಲೆಯ ಮೇಲೆಯೂ 1 ಲಕ್ಷಕ್ಕೂ ಹೆಚ್ಚು ಸಾಲದ ಹೊರೆ ಬಿದ್ದಿದೆ. ಸಾಲದ ಸುಳಿಗೆ ತಳ್ಳಿದ್ದೇ ಸಾಧನೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಮುಡಾ ಹಗರಣ ಹಾಗೂ ಇಡಿ ಜಪ್ತಿಯ ಖುಷಿಯೇ?
ಮುಖ್ಯಮಂತ್ರಿಗಳ ಅತ್ಯಾಪ್ತ ಮರಿಗೌಡರ ಆಸ್ತಿ ಸೇರಿದಂತೆ ಬರೋಬ್ಬರಿ 100 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಮತ್ತೊಂದೆಡೆ, ಸಿಬಿಐ ತನಿಖೆಯನ್ನು ತಡೆಯಲು ರಾಜ್ಯ ಸರ್ಕಾರ ಬೊಕ್ಕಸದ 3.16 ಕೋಟಿ ಹಣವನ್ನು ವಕೀಲರ ಫೀಸ್ ಆಗಿ ಪಾವತಿಸಿದೆ. ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಈ ವಿಜಯೋತ್ಸವವೇ ಎಂದು ಕಿಡಿಕಾರಿದ್ದಾರೆ.
ದಿವಾಳಿಯಾದ ಎಸ್ಕಾಂಗಳು-
ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು (ESCOMs) ಒಟ್ಟು 42,750 ಕೋಟಿ ಸಾಲದಲ್ಲಿ ಮುಳುಗಿವೆ. ಬೆಸ್ಕಾಂ ಒಂದರಿಂದಲೇ 6,211 ಕೋಟಿ ಬಾಕಿ ಉಳಿದಿದೆ. ಬಡವರ ಮೇಲೆ ಪದೇ ಪದೇ ವಿದ್ಯುತ್ ದರ ಏರಿಕೆ ಹೆರಿ, ಕಂಪನಿಗಳನ್ನು ದಿವಾಳಿ ಮಾಡಿದ್ದು ನಿಮ್ಮ ಸಾಧನೆಯೇ ಎಂದು ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿವಾದಿತ ಕಂಪನಿಗೆ 10,000 ಕೋಟಿ ಟೆಂಡರ್?
ಲೋಕೋಪಯೋಗಿ ಇಲಾಖೆಯು ಹೊಸಕೋಟೆ ಹಾಗೂ ಮಾಲೂರು ರಸ್ತೆ ಯೋಜನೆಗಳಿಗಾಗಿ ಸಿಬಿಐ ತನಿಖೆ ಎದುರಿಸುತ್ತಿರುವ ಕಂಪನಿಯೊಂದಕ್ಕೆ 10,000 ಕೋಟಿ ಮೊತ್ತದ ಬೃಹತ್ ಟೆಂಡರ್ ನೀಡಿದೆ. ಭ್ರಷ್ಟ ಕಂಪನಿಗಳಿಗೆ ಮಣೆ ಹಾಕುವುದೇ ನಿಮ್ಮ "ಆಡಳಿತ ಪಾರದರ್ಶಕತೆ"ಯೇ ಎಂದು ಚುಚ್ಚಿದ್ದಾರೆ.
ಕೆಐಎಡಿಬಿ ಹಗರಣದ ಸರಮಾಲೆ
ವಾಲ್ಮೀಕಿ ನಿಗಮ, ಮುಡಾ, ಕೆಪಿಎಸ್‌ಸಿ ಹಗರಣಗಳ ಬೆನ್ನಲ್ಲೇ ಬಳ್ಳಾರಿ ಕೆಐಎಡಿಬಿ ಕಚೇರಿಯಲ್ಲಿ ನಕಲಿ ಚೆಕ್ ಹಾಗೂ ಬ್ಯಾಂಕ್ ವಹಿವಾಟುಗಳ ಮೂಲಕ 16 ಕೋಟಿ ಅಕ್ರಮ ವರ್ಗಾವಣೆ ಬೆಳಕಿಗೆ ಬಂದಿದೆ. ಹಗರಣಗಳ ಸರಣಿಗೆ ಮತ್ತೊಂದು ಗರಿ ಸೇರಿದ್ದಕ್ಕೆ ಈ ಸಂಭ್ರಮವೇ ಎಂದು ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವದ ಗಂಟಲು ಹಿಸುಕುವಿಕೆ
ಬಿಜೆಪಿ ಬಿಡುಗಡೆ ಮಾಡಿದ "2 ವರ್ಷದ ವೈಫಲ್ಯ"ದ ಚಾರ್ಜ್‌ಶೀಟ್‌ಗೆ ಹೆದರಿ ಸರ್ಕಾರ ಮಾನನಷ್ಟ ಮೊಕದ್ದಮೆ ಹೂಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರದ ತಪ್ಪುಗಳನ್ನು ಟೀಕಿಸುವವರ ಮೇಲೆ ಪ್ರಕರಣ ದಾಖಲಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಗಂಟಲು ಹಿಸುಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನಿಲ್ಲದ ಕುರ್ಚಿ ಕಿತ್ತಾಟ-
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಕುರ್ಚಿ ಕಿತ್ತಾಟ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕಕ್ಕೆ ಮುಜುಗರ ತಂದಿದೆ. ಈ ಸಮಾವೇಶ ಸಿದ್ದರಾಮಯ್ಯನವರಿಗೆ ಬೀಳ್ಕೊಡುಗೆ ನೀಡುವ ಸಂಭ್ರಮವೋ ಅಥವಾ ಮುಂದಿನ 2 ವರ್ಷ ಈ ಕಿತ್ತಾಟ ಮುಂದುವರಿಸುವ ಸಂಕಲ್ಪವೋ ಎಂದು ಲೇವಡಿ ಮಾಡಿದ್ದಾರೆ.
ರೈತರ ಆತ್ಮಹತ್ಯೆ ಮತ್ತು ಸಂಕಷ್ಟ
ಕಬ್ಬು ಹಾಗೂ ಮೆಕ್ಕೆಜೋಳ ಬೆಳೆದ ರೈತರು ಬೀದಿಗಿಳಿದು ಹೋರಾಡುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ವರ್ಷಗಟ್ಟಲೆ ಕಚೇರಿ ಅಲೆದರೂ ಕೆಲಸವಾಗದೆ ರೈತರು ಕಚೇರಿಗಳಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಹೊಣೆ ಯಾರು?
ಏಪ್ರಿಲ್ 29ರಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಸಂಕೀರ್ಣದ ಗೋಡೆ ಕುಸಿದು 3 ಮಕ್ಕಳು ಸೇರಿದಂತೆ 7 ನಿರಪರಾಧಿಗಳು ಬಲಿಯಾಗಿದ್ದಾರೆ. ಲೋಕಾಯುಕ್ತರೇ ಸ್ವಯಂಪ್ರೇರಿತ ವಿಚಾರಣೆ ನಡೆಸಿ ಇದನ್ನು "ದುರಾಡಳಿತದ ಫಲ" ಎಂದು ಕರೆದಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿ ಜನರ ಪ್ರಾಣ ತೆಗೆದ ಪಾಪಕ್ಕೆ ಈ ಉತ್ಸವ ಬೇಕಿತ್ತೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಔಷಧ, ವೈದ್ಯರು ಹಾಗೂ ಸ್ಕ್ಯಾನಿಂಗ್ ಸೌಲಭ್ಯಗಳಿಲ್ಲದೆ ಸರ್ಕಾರಿ ಆಸ್ಪತ್ರೆಗಳು ಸ್ಮಶಾನದಂತಾಗಿವೆ ಎಂದು ದೂರಿದ್ದಾರೆ.
"ರಾಜ್ಯದ ಜನತೆ ತೀವ್ರ ಸಂಕಷ್ಟದಲ್ಲಿರುವಾಗ, ಸಾರ್ವಜನಿಕರ ತೆರಿಗೆ ಹಣದಲ್ಲಿ 4,000 ಬಸ್‌ಗಳನ್ನು ಬುಕ್ ಮಾಡಿ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸಂಭ್ರಮಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ.


